ಜಮೀನು ಒತ್ತುವರಿ ತೆರವಿನಿಂದ ನೊಂದು ಮಹಿಳೆ ಆತ್ಮಹತ್ಯೆ

16 HANUR 6
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 46;
Published on

ಹನೂರು: ತಾಲೂಕಿನ ದೊಡ್ಡಾಲತ್ತೂರು ಗ್ರಾಮದಲ್ಲಿ ಜಮೀನು ಒತ್ತುವರಿ ತೆರವುಗೊಳಿಸಿದ ಕಾರಣ ಬೇಸತ್ತ ಮಹಿಳೆಯೊಬ್ಬರು ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಸ್ಥಳದಲ್ಲೇ ಶವವಿಟ್ಟು ಪ್ರತಿಭಟನೆ ನಡೆಸಿದರು.

ಗ್ರಾಮದ ಸೋಮಣ್ಣ ಅವರ ಪತ್ನಿ ರಾಜಮ್ಮ ಆತ್ಮಹತ್ಯೆ ಮಾಡಿಕೊಂಡವರು.

ಕಾರಣವೇನು?: ರಾಜಮ್ಮ ಅವರಿಗೆ ಪತಿ ಸೋಮಣ್ಣ ಹಾಗೂ ನಾಲ್ವರು ಹೆಣ್ಣು ಮಕ್ಕಳಿದ್ದು, ಹಲವು ವರ್ಷಗಳಿಂದ ಗ್ರಾಮದ ಸರ್ವೇ ನಂ.80ರಲ್ಲಿ ಕೃಷಿ ಮಾಡುತ್ತಿದ್ದರು. ಕಳೆದ ವರ್ಷ ಕೆಂಪಯ್ಯನಹಟ್ಟಿ ಗ್ರಾಮಸ್ಥರು ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿ ದೊಡ್ಡಾಲತ್ತೂರು ಗ್ರಾಮದ ಸರ್ಕಾರಿ ಜಾಗ ಸರ್ವೇ ನಂ.80ರಲ್ಲಿ 3.96 ಎಕರೆ ಪೈಕಿ 20 ಸೆಂಟ್ ಜಾಗವನ್ನು ಮಂಜೂರು ಮಾಡಿದ್ದರು. ಆದರೆ ಈ ಜಾಗವು ಒತ್ತುವರಿಯಾಗಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ಆ.6ರಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ತೆರವುಗೊಳಿಸಿ ಈ ಸ್ಥಳವನ್ನು ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಯ ಹೆಸರಿನಲ್ಲಿ ಇಂಡೀಕರಿಸಿ ಸ್ಥಳದಲ್ಲಿ ನಾಮಫಲಕ ಅಳವಡಿಸಿದ್ದರು. ಇದರಿಂದ ನೊಂದು ರಾಜಮ್ಮ ಶನಿವಾರ ಮನೆ ಸಮೀಪದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಶವವನ್ನು ಒತ್ತುವರಿ ತೆರವು ಮಾಡಿದ್ದ ಸ್ಥಳದಲ್ಲಿಟ್ಟು ಶವವಿಟ್ಟು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಮೃತ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಮಧ್ಯಾಹ್ನದ ಬಳಿಕ ಸ್ಥಳಕ್ಕಾಗಮಿಸಿದ ಯಳವ ಸಮುದಾಯದ ಅಧ್ಯಕ್ಷ ನಾಗರಾಜ ಗುರೂಜಿ, ಕುಟುಂಬಸ್ಥರಿಗೆ ಸರ್ಕಾರದಿಂದ ಮಂಜೂರಾಗಿದ್ದ ಕೃಷಿ ಮಾಡುತ್ತಿದ್ದ ಸ್ಥಳವನ್ನು ತೆರವುಗೊಳಿಸಿರುವುದು ಸರಿಯಲ್ಲ. ಇದರಿಂದ ಒಬ್ಬರು ಪ್ರಾಣವನ್ನು ಕಳೆದುಕೊಂಡಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ತಹಸೀಲ್ದಾರ್ ಎನ್.ಕೆ.ಚೈತ್ರಾ ಮಾತನಾಡಿ, ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು. ಶವಸಂಸ್ಕಾರ ಮಾಡುವಂತೆ ಮನವಿ ಮಾಡಿದರು. ಆದರೆ ಇದಕ್ಕೊಪ್ಪದ ಪ್ರತಿಭಟನಾಕಾರರು, ಅಳವಡಿಸಿರುವ ನಾಮಫಲಕವನ್ನು ಹಾಗೂ ಕಲ್ಲಿನ ಕಂಬಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಶವಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟುಹಿಡಿದರು.

ಶಾಸಕ ಭೇಟಿ, ನ್ಯಾಯದ ಭರವಸೆ: ಇದಕ್ಕೂ ಮೊದಲು ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದರು. ರಾಜಮ್ಮ ಅವರು ದುಡುಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೇಸರದ ಸಂಗತಿ. ಯಾವುದೇ ಕಾರಣಕ್ಕೂ ಧೃತಿಗೆಡದೆ ಧೈರ್ಯದಿಂದಿರಿ. ಘಟನೆ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಮೂಲಕ ಮೃತ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.

ದೂರು ದಾಖಲು: ಮೃತರ ಪತಿ ಸೋಮಣ್ಣ ಅವರು ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸುಳ್ಳು ದಾಖಲೆ ಸೃಷ್ಟಿಸಿ ನನ್ನ ಪತ್ನಿ ಸಾವಿಗೆ ಕಾರಣರಾದ ಕೆಂಪಯ್ಯನಹಟ್ಟಿ ಗ್ರಾಮದ ಗುರುದೇವ, ಗ್ರಾಮಲೆಕ್ಕಿಗರಾದ ಮಹದೇವಪ್ರಸಾದ್, ಆರ್‌ಐ ಶಿವಕುಮಾರ್ ಹಾಗೂ ಅಂದಿನ ತಹಸೀಲ್ದಾರ್ ಗುರುಪ್ರಸಾದ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಇಲ್ಲೇ ಹೂತುಹಾಕಿ ಎಂದಿದ್ದ ರಾಜಮ್ಮ: ಆ.6ರಂದು ಸರ್ವೇ ಕಾರ್ಯ ನಡೆಯುತ್ತಿದ್ದ ವೇಳೆ ಕುಟುಂಬಸ್ಥರು ಸ್ಥಳಕ್ಕಾಗಮಿಸಿ ಒತ್ತುವರಿ ತೆರವು ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಪೊಲೀಸರು ತಡೆದಿದ್ದರು. ಈ ವೇಳೆ ರಾಜಮ್ಮ ಈ ಜಾಗದಲ್ಲಿ ಹಲವು ವರ್ಷಗಳಿಂದಲೂ ಕೃಷಿ ಮಾಡುತ್ತಿದ್ದೇವೆ. ಆದರೆ ಇದೀಗ ಸರ್ಕಾರ ವಶಕ್ಕೆ ಪಡೆದು ಅನ್ಯಾಯವೆಸಗಿದೆ. ಹಾಗಾಗಿ ನಾನು ಸಾಯುತ್ತೇನೆ, ಇಲ್ಲೇ ನನ್ನನ್ನು ಹೂತುಹಾಕಿ ಎಂದು ಗೋಳಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net