

ಶಿರಸಿ: ಕರೊನಾ ಆತಂಕದ ನಡುವೆಯೂ ಕೃಷಿಕರು ಜಮೀನಿನತ್ತ ಮುಖ ಮಾಡಿದ್ದು, ಮುಂಗಾರು ಹಂಗಾಮಿನ ಹೊಸ ಬೆಳೆಗಳ ನಾಟಿಗೆ ಭೂಮಿ ಹದಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಪ್ರಸಕ್ತ ವರ್ಷ ಈಗಾಗಲೇ ಉತ್ತಮ ಮಳೆಯಾಗಿದ್ದು, ಕೃಷಿ ಪೂರಕ ಚಟುವಟಿಕೆಗಳು ಗರಿಗೆದರಿವೆ. ಕೂರಿಗೆ ಬಿತ್ತನೆಗಿಂತ ಈಗ ಹೆಚ್ಚಿನ ರೈತರು ನಾಟಿ ಬಿತ್ತನೆಯತ್ತ ಮುಖ ಮಾಡಿದ್ದು, ಸದ್ಯ ಗೊಬ್ಬರ ಹಾಕಿ ಭೂಮಿ ಹದಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕರೊನಾ ವೈರಸ್ ಭಯ ಇರುವ ಕಾರಣ ರೈತರು ಹೊಲದಲ್ಲಿ, ಪರಸ್ಪರ ಅಂತರ ಕಾಯ್ದುಕೊಂಡೇ ಕೆಲಸ ಮಾಡುತ್ತಿದ್ದಾರೆ. ಜತೆಗೆ ಬೇರೆಯವರ ಗದ್ದೆಗೆ ಕೆಲಸಕ್ಕೆ ಹೋಗಲು ಕೊಂಚ ಹಿಂದೇಟು ಹಾಕುತ್ತಿರುವ ಕೃಷಿ ಕಾರ್ವಿುಕರು, ತಮ್ಮ ಹೊಲ ಹದಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ.
9,960 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ: ಕೃಷಿ ಇಲಾಖೆಯು ರೈತರಿಗೆ ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ತಾಲೂಕುಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತ, ಮೆಕ್ಕೆಜೋಳ, ಗೊಬ್ಬರಗಳ ಸಂಗ್ರಹವಿಡುತ್ತದೆ. ಜಿಲ್ಲೆಯಲ್ಲಿ ಸುಮಾರು 9,960 ಕ್ವಿಂಟಾಲ್ನಷ್ಟು ಬಿತ್ತನೆ ಬೀಜದ ಬೇಡಿಕೆಯಿದ್ದು, ವಾರದೊಳಗೆ ಭತ್ತ, ಹೈಬ್ರೀಡ್ ಭತ್ತ, ಮೆಕ್ಕೆಜೋಳದ ಬೀಜಗಳು ರೈತ ಸಂಪರ್ಕ ಕೇಂದ್ರಗಳಿಗೆ ಬರಲಿವೆ. ಮುಂಗಾರು ಹಂಗಾಮು ಜೂನ್ನಿಂದ ಸೆಪ್ಟೆಂಬರ್ವರೆಗೆ 21 ಸಾವಿರ ಟನ್ ಗೊಬ್ಬರಕ್ಕೆ ಬೇಡಿಕೆಯಿದ್ದು, ಅದು ಕೂಡ ಶೀಘ್ರದಲ್ಲಿಯೇ ಬರಲಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸಕ್ತ ವರ್ಷ ಕೃಷಿ ಕಾರ್ಯಕ್ಕೆ ಉತ್ತಮ ವಾತಾವರಣವಿದೆ. ಈಗಾಗಲೇ ಮೂರ್ನಾಲ್ಕು ಬಾರಿ ಮಳೆ ಬಿದ್ದಿದೆ. ಇದರಿಂದ ಭೂಮಿ ಹದಗೊಳಿಸುವ ಕಾರ್ಯ ಮಾಡುತ್ತಿದ್ದೇವೆ.| ಶೇಖರಪ್ಪ ಬನವಾಸಿ ರೈತ
ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ರೈತರು ಭೂಮಿ ಹದಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಈಗಾಗಲೇ ಭತ್ತ, ಜೋಳದ ಬೀಜಕ್ಕಾಗಿ ಬೇಡಿಕೆ ಆರಂಭವಾಗಿದೆ. ಎಲ್ಲ ತಾಲೂಕುಗಳ ಬೇಡಿಕೆ, ಗುರಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ವಾರದೊಳಗೆ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೂ ಬೀಜದ ಪೂರೈಕೆ ಆಗಲಿದೆ. ನಂತರ ಅದನ್ನು ರೈತರಿಗೆ ವಿತರಿಸಲಾಗುವುದು.ಹೊನ್ನಪ್ಪ ಗೌಡ ಕೃಷಿ ಇಲಾಖೆ ಜೆಡಿ ಕಾರವಾರ