

ರಾಣೆಬೆನ್ನೂರ: ಜಮೀನಿಗೆ ತೆರಳುವ ರಸ್ತೆ ನಿರ್ವಣಕ್ಕೆ ಸಂಬಂಧಿಸಿ ಕೆಲವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದು, ರೈತರು ಕೃಷಿ ಚಟುವಟಿಕೆಯನ್ನೇ ಸ್ಥಗಿತಗೊಳಿಸುವ ಸ್ಥಿತಿ ನಿರ್ವಣವಾಗಿದೆ.
ಮೈದೂರ ಪ್ಲಾಟ್ ಬಳಿ ಗ್ರಾಮದ ನೂರಾರು ರೈತರ ಜಮೀನುಗಳಿವೆ. ಈ ಎಲ್ಲ ರೈತರ ಜಮೀನುಗಳಿಗೆ ತೆರಳಲು ಪ್ಲಾಟ್ನಿಂದ ರಸ್ತೆ ಕೂಡ ಇದೆ. ನಿತ್ಯವೂ ರೈತರು ಇದೇ ಮಾರ್ಗವಾಗಿ ಓಡಾಡಿ ಕೃಷಿ ಕಾಯಕ ಮಾಡುತ್ತಿದ್ದರು. ಅಡಕೆ, ತೆಂಗು, ಬಾಳೆ, ಹೆಬ್ಬೇವು, ಶ್ರೀಗಂಧ ಹಾಗೂ ಉಳ್ಳಾಗಡ್ಡಿ, ಮೆಕ್ಕೆಜೋಳ ಸೇರಿ ನಾನಾ ಬಗೆಯ ಬೆಳೆಗಳನ್ನು ಬೆಳೆದಿದ್ದಾರೆ.
ಆದರೆ, 2 ವರ್ಷದಿಂದ ರೈತರ ಏಳಿಗೆ ಸಹಿಸಲಾಗದ ಕೆಲವರು ‘ಈ ಭಾಗದಲ್ಲಿ ನಿಮಗೆ ಓಡಾಡಲು ರಸ್ತೆ ಇಲ್ಲ’ ಎನ್ನುತ್ತಿದ್ದಾರೆ. ರೈತರು ಜಮೀನಿನ ಸರ್ವೆ ಮಾಡಿಸಿ, ರಸ್ತೆ ಇರುವ ಬಗ್ಗೆ ನಕ್ಷೆಯಲ್ಲಿ ತೋರಿಸಿದರೂ ಇಲ್ಲಿ ಓಡಾಡಲು ಬಿಡುತ್ತಿಲ್ಲ.
ರಸ್ತೆ ಅಭಿವೃದ್ಧಿ ನಿಲ್ಲಿಸಿದ ಗ್ರಾಪಂ: ರೈತ ಸಂಪರ್ಕ ರಸ್ತೆ ಯೋಜನೆಯಡಿ ಈ ರಸ್ತೆಯನ್ನು 7.35 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಗ್ರಾಪಂ ಅನುದಾನ ಬಿಡುಗಡೆ ಮಾಡಿದೆ. 3-9-2019ರಂದು ಕಾಮಗಾರಿ ಆರಂಭಿಸಿ, ಒಂದು ಹಂತದ ಕಾಮಗಾರಿ ಸಹ ಮಾಡಲಾಗಿದೆ. ಆದರೀಗ ರಸ್ತೆ ಅಕ್ಕಪಕ್ಕದ ಜನರು ತಕರಾರು ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಕಾರಣಕ್ಕೆ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಅಲ್ಲದೆ, ನಾಮಫಲಕವನ್ನೂ ಕಿತ್ತು ಹಾಕಿದ್ದಾರೆ.
ಇದೇ ಮಾರ್ಗವಾಗಿ ಜಮೀನುಗಳಿಗೆ ತೆರಳಲು ಮುಂದಾದರೆ ಅಕ್ಕಪಕ್ಕದ ಜಮೀನುಗಳ ರೈತರು ನಿತ್ಯವೂ ಕಿರುಕುಳ ಕೊಡುತ್ತಿದ್ದು, ಮಹಿಳೆಯರನ್ನು ಮುಂದೆ ಬಿಟ್ಟು ಹೆದರಿಸುತ್ತಿದ್ದಾರೆ. ಜಾತಿ ನಿಂದನೆ ಪ್ರಕರಣ ದಾಖಲಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಇಲ್ಲಿನ ರೈತರು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು, ಜಿಲ್ಲಾಡಳಿತಕ್ಕೂ ದೂರು ಸಲ್ಲಿಸಲಾಗಿದೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.
ಬೆಳೆಯನ್ನೇ ಕಳೆದುಕೊಂಡ ರೈತರು: ಕಳೆದ ವರ್ಷ ಪಪ್ಪಾಯಿ ಗಿಡಗಳನ್ನು ಬೆಳೆದಿದ್ದೆವು. ಪಪ್ಪಾಯಿ ಉತ್ತಮವಾಗಿ ಬೆಳೆದು ನಿಂತಾಗ ಮಾರಾಟ ಮಾಡಬೇಕು ಎನ್ನುವಷ್ಟರಲ್ಲಿ ಪಕ್ಕದ ಜಮೀನಿನ ಮಹಿಳೆಯೊಬ್ಬಳು ರಸ್ತೆಗೆ ಗುಂಡಿ ತೋಡಿ ಯಾವುದೇ ವಾಹನ ಒಳಗೆ ಬರದಂತೆ ಮಾಡಿದರು. ಆಗ ಲಕ್ಷಾಂತರ ರೂ. ನಷ್ಟ ಅನುಭವಿಸಬೇಕಾಯಿತು. ಕೆಲ ರೈತರು ಉಳ್ಳಾಗಡ್ಡಿಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಜಮೀನಿನಲ್ಲಿಯೇ ಕೈ ಬಿಟ್ಟರು. ಆದ್ದರಿಂದ ಈ ಬಗ್ಗೆ ಪೊಲೀಸರಿಗೆ, ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಲಾಗಿದ್ದು, ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ರೈತ ಮನೋಜ ಸಾವುಕಾರ ಒತ್ತಾಯಿಸಿದ್ದಾರೆ.
ಗ್ರಾಮಸಭೆಯಲ್ಲಿ ರೈತರು ತಮ್ಮ ಜಮೀನುಗಳಿಗೆ ಸೂಕ್ತ ದಾರಿ ನಿರ್ವಿುಸಿಕೊಡಿ ಎಂದು ಮನವಿ ಮಾಡಿದ್ದರಿಂದ 7.35 ಲಕ್ಷ ರೂ. ವೆಚ್ಚದಲ್ಲಿ ರೈತ ಸಂಪರ್ಕ ರಸ್ತೆ ನಿರ್ವಿುಸಲಾಗುತ್ತಿತ್ತು. ಆದರೆ ರಸ್ತೆಯ ಇನ್ನೊಂದು ಬದಿಯ ಮೂವರು ರೈತರು ಜಮೀನು ಒತ್ತುವರಿ ಆರೋಪ ಮಾಡಿ ತಕರಾರು ಅರ್ಜಿ ನೀಡಿದ್ದಾರೆ. ಹೀಗಾಗಿ ಪಿಡಿಒ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಒತ್ತುವರಿ ಬಗ್ಗೆ ಸರ್ವೆ ಮಾಡಲು ಸಂಬಂಧಿಸಿದ ಇಲಾಖೆಯವರಿಗೆ ಅರ್ಜಿ ಸಲ್ಲಿಸಲಾಗಿದೆ. ಅವರಿಂದ ವರದಿ ಬಂದ ಬಳಿಕ ರಸ್ತೆ ಕಾಮಗಾರಿ ಮುಂದುವರಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು. | ಎಸ್.ಎಂ. ಕಾಂಬಳೆ, ತಾಪಂ ಇಒ