

ಕಾರವಾರ: ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದ ತಬ್ಲಿಗಿ ಜಮಾತ್ ಕಾರ್ಯಕ್ರಮದಲ್ಲಿ ಜಿಲ್ಲೆಯ 21 ಜನರು ಭಾಗಿಯಾಗಿದ್ದರು ಎಂಬ ಮಾಹಿತಿ ಕೇಂದ್ರ ಸರ್ಕಾರ ಕಳಿಸಿದೆ ಎಂದು ಎಸ್ಪಿ ಶಿವ ಪ್ರಕಾಶ ದೇವರಾಜು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಂಡೇಲಿಯ 8 ಜನ ಮಾತ್ರ ಜಿಲ್ಲೆಗೆ ಆಗಮಿಸಿದ್ದು, ಅವರೆಲ್ಲರನ್ನೂ ಪತ್ತೆ ಹಚ್ಚಿ ಹೋಂ ಕ್ವಾರೆಂಟೇನ್ನಲ್ಲಿ ಇರಿಸಲಾಗಿದೆ. ಇಬ್ಬರಲ್ಲಿ ಜ್ವರದ ಲಕ್ಷಣ ಇದ್ದು, ಅವರ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಇನ್ನಿಬ್ಬರು ಗೋವಾದಲ್ಲಿ ಇರುವುದಾಗಿ ಮಾಹಿತಿ ಬಂದಿದೆ. ಇನ್ನೂ 11 ಜನರು ಉತ್ತರ ಕನ್ನಡದ ವಿಳಾಸ ಹೊಂದಿದವರಾಗಿದ್ದರೂ ಜಿಲ್ಲೆಗೆ ಆಗಮಿಸಿಲ್ಲ ಎಂದು ಸ್ಪಷ್ಟಪಡಿಸಿದರು.
10 ಪ್ರಕರಣ: ಜಿಲ್ಲೆಯಲ್ಲಿ ಜಾರಿಯಾದ ಸೆಕ್ಷನ್ 144 ಮುರಿದ ಆರೋಪದ ಮೇಲೆ ಮಾ. 24 ರಿಂದ ಇಲ್ಲಿಯವರೆಗೆ ಹಳಿಯಾಳ, ದಾಂಡೇಲಿ, ಕದ್ರಾ, ಮಲ್ಲಾಪುರ, ಭಟ್ಕಳ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.
4 ಬೈಕ್ 1 ಕಾರನ್ನು ವಶಕ್ಕೆ ಪಡೆಯಲಾಗಿದೆ. 9 ಜನರನ್ನು ಬಂಧಿಸಿ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿದೆ. ಕಾನೂನು ಮುರಿಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಮಸೀದಿಯಲ್ಲಿ ಸೇರಿದವರ ವಿರುದ್ಧ ಪ್ರಕರಣ: ಹಳಿಯಾಳದಲ್ಲಿ ನಿಷೇಧಾಜ್ಞೆ ಆದೇಶ ಮುರಿದು ಚೌಹಾಣ್ ಪ್ಲಾಟ್ ಹತ್ತಿರದ ಮಸ್ಜಿದ್ ಎ ಖುಬಾದಲ್ಲಿ ಸೇರಿದ 12 ಜನರ ವಿರುದ್ಧ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ನಿಷೇಧಾಜ್ಞೆ ನಿಯಮ ಮುರಿದಿದ್ದಲ್ಲದೇ ಅದನ್ನು ಕೇಳಲು ಹೋದ ಸರ್ಕಾರಿ ಅಧಿಕಾರಿಗಳನ್ನು ನಿಂದಿಸಿ, ಜೀವ ಬೆದರಿಕೆ ಹಾಕಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ. ಭಜಂತ್ರಿ ಗಲ್ಲಿಯ ಸ್ಲಂ ಏರಿಯಾದ ಸುಲೇಮಾನ್ ಮಹ್ಮದಸಾಬ್ ಕಿತ್ತೂರ್,ಖಲೀಲ್ ಅಹ್ಮದ್ ಅಬ್ದುಲ್ ರೆಹಮಾನ್ ಮುಲ್ಲಾ, ಮುಜಾಮಿಲ್ ಅಬ್ದುಲ್ ಸತ್ತಾರ್ ಕಾಕರ್, ಅಬ್ದುಲ್ ಸತ್ತಾರ್ ಚಾಂದಸಾಬ್ ಕಾಕರ್, ಉಮ್ಮರಷಾ ನನ್ನೆಷಾ ಸಯ್ಯದ್, ಅಬ್ದುಲ್ ಮಜೀದ್ ಪೀರಸಾಬ್ ಚಿಗರಿ, ಅಬ್ದುಲ್ ರೆಹಮಾನ್ ಕಟ್ಟಮನಿ, ಗಫಾರ್ ಅಬ್ದುಲ್ ಸತ್ತಾರ್ ಕಾಕರ್, ಖಾಸಿಂ ಖಾದರಸಾಬ್ ಡೋರಿ, ಯಲ್ಲಾಪುರ ನಾಕಾದ ರಫೀಕ್ ಅಹ್ಮದ್ ಅಲಿಸಾಬ್ ನಾಯಕ್, ಚೌಹಾಣ್ ಪ್ಲಾಟ್ನ ರಿಜ್ವಾನ್ ಬುಡ್ಡೆಸಾಬ್ ಮುಲ್ಲಾ, ಸುಹೇಲ್ ಉಮ್ಮರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸುಳ್ಳು ಸುದ್ದಿ ಇಬ್ಬರ ವಿರುದ್ಧ ಪ್ರಕರಣ: ದಾಂಡೇಲಿಯಲ್ಲಿ ಕರೊನಾ ರೋಗ ಹರಡಿದೆ ಎಂದು ವ್ಯಕ್ತಿಯೊಬ್ಬರ ಹೆಸರು ಹಾಕಿ ಸತ್ಯಕ್ಕೆ ದೂರವಾದ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ವಿನಾಯಕ ಚೌಹಾಣ್, ವೆಂಕಟೇಶ ಪ್ರಸಾದ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.
ಆತಂಕ ಪಡುವ ಅಗತ್ಯವಿಲ್ಲ
ಕಾರವಾರ: ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ಬಂದಿದೆ. ಜನತೆ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಸೋಂಕಿನ ಅನುಮಾನದ ಹಿನ್ನೆಲೆ ಇದುವರೆಗೆ 99 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳಿಸಲಾಗಿತ್ತು. ಇದುವರೆಗೆ 8 ಜನರಲ್ಲಿ ಸೋಂಕು ಇರುವುದು ಖಚಿತವಾಗಿದೆ. 82 ಜನರಲ್ಲಿ ಯಾವುದೇ ಸೋಂಕು ಇಲ್ಲ ಎಂದು ವರದಿ ಬಂದಿದೆ. ನಿಯಮಾವಳಿಯಂತೆ ಇಲ್ಲದ ಕಾರಣ 8 ಜನರ ಮಾದರಿ ಪರೀಕ್ಷೆಗೆ ಪ್ರಯೋಗಾಲಯ ನಿಕಾರಿಸಿದೆ. ಇನ್ನು ಒಬ್ಬ ಶಂಕಿತನ ಆರೋಗ್ಯ ವರದಿ ಬರುವುದು ಬಾಕಿ ಇದೆ ಎಂದು ಅವರು ವಿವರಿಸಿದ್ದಾರೆ.
ಜಿಲ್ಲೆಯಲ್ಲಿ 1422 ಜನರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಅದರಲ್ಲಿ 258 ಜನರು 14 ದಿನದ ವೈದ್ಯಕೀಯ ನಿಗಾದಲ್ಲಿ ಇದ್ದಾರೆ. 697 ಜನರು 14 ದಿನದ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. 447 ಜನರು 28 ದಿನದ ನಿಗಾ ಅವಧಿಯನ್ನು ಮುಗಿಸಿದ್ದು, ಅವರಲ್ಲಿ ಯಾವುದೇ ರೊಗ ಇಲ್ಲ ಎಂದು ಸಾಬೀತಾಗಿದೆ.
ರಾಜ್ಯದ ಇತರ ಕೆಲವು ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಖಚಿತವಾಗಿರುವ ಕರೊನಾ ಸೋಂಕಿನ ಪ್ರಕರಣಗಳ ಪ್ರಮಾಣ ಕಡಿಮೆ ಇದೆ.
ಜಿಲ್ಲೆಯಲ್ಲಿ ಕ್ಲೀನಿಕ್ಗಳು ತೆರೆಯಬೇಕೆಂದು ಆದೇಶಿಸಲಾಗಿದೆ. ಖಾಸಗಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸಂಚಾರಕ್ಕೆ ಪೊಲೀಸರು ಯಾವುದೇ ತೊಂದರೆ ನೀಡಬಾರದು. ಅವರ ವಾಹನಗಳಿಗೆ ಪೆಟ್ರೋಲ್ ಒದಗಿಸಬೇಕೆಂದು ಸೂಚಿಸಲಾಗಿದೆ ಎಂದು ವಿವರಿಸಿದ್ದಾರೆ.
ಸತೀಶ ಸೈಲ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ
ಕಾರವಾರ: ಕರೊನಾ ವೈರಸ್, ಲಾಕ್ಡೌನ್ ಪರಿಸ್ಥಿತಿ ಸಂಬಂಧ ಕಾರ್ಯಪ್ರವೃತ್ತವಾಗಲು ಕೆಪಿಸಿಸಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಿದೆ. ಉತ್ತರ ಕನ್ನಡ ಜಿಲ್ಲೆಯ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರಾಗಿ ಸತೀಶ ಸೈಲ್ ಅವರನ್ನು ನೇಮಿಸಲಾಗಿದೆ. ಪಕ್ಷದ ಜಿಲ್ಲಾ ಅಧ್ಯಕ್ಷ ಭೀಮಣ್ಣ ನಾಯ್ಕ ಅವರ ಸಹಕಾರದೊಂದಿಗೆ ಕಾರ್ಯನಿರ್ವಹಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಹೊರಗುತ್ತಿಗೆ ಕಾರ್ವಿುಕರಿಗೆ ರಜೆ ನೀಡಲು ಒತ್ತಾಯ
ಕಾರವಾರ: ಕೈಗಾದಲ್ಲಿ ಕಾರ್ವಿುಕರಿಗೆ ರಜೆ ನೀಡದ ಕುರಿತು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹಾಗೂ ಸತೀಶ ಸೈಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೇಶವನ್ನೇ ಲಾಕ್ಡೌನ್ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಆದೇಶ ಮಾಡಿದ್ದಾರೆ. ಕೈಗಾ ವಿದ್ಯುತ್ ತಯಾರಿಸುವ ತುರ್ತು ಸೇವೆ ಸರಿ. ಆದನ್ನು ನಿಲ್ಲಿಸುವಂತೆ ಹೇಳುವುದಿಲ್ಲ.
ಅದರ ನೆಪದಲ್ಲಿ ತುರ್ತು ಅವಶ್ಯಕತೆ ಇಲ್ಲದ ಗಾರ್ಡನಿಂಗ್, ಮುಂತಾದ ಕೆಲಸ ಮಾಡುವ 312 ಹೊರ ಗುತ್ತಿಗೆ ಕಾರ್ವಿುಕರನ್ನೂ ಕೆಲಸಕ್ಕೆ ಕರೆಯುತ್ತಿರುವುದು ಸರಿಯಲ್ಲ. ಅಷ್ಟೊಂದ ಜನರು ಒಟ್ಟಿಗೆ ಸೇರಿ ಕೆಲಸ ಮಾಡುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಅಲ್ಲದೆ, ಕೈಗಾದ ಎನ್ಪಿಸಿಐಎಲ್ ಉದ್ಯೋಗಿಗಳಿಗೆ ಇದ್ದ ಸುರಕ್ಷಾ ಕ್ರಮವನ್ನು ಸ್ಥಳೀಯ ಹೊರ ಗುತ್ತಿಗೆ ಕಾರ್ವಿುಕರಿಗೆ ನೀಡುತ್ತಿಲ್ಲ. ಈ ಕುರಿತು ಕ್ರಮ ವಹಿಸಬೇಕು ಎಂದು ಆನಂದ ಅಸ್ನೋಟಿಕರ್ ಹಾಗೂ ಸತೀಶ ಸೈಲ್ ಇಬ್ಬರೋ ಒತ್ತಾಯಿಸಿದ್ದಾರೆ.