ಜನಾಂದೋಲನದಲ್ಲಿ ಕೈ ನಾಯಕರ ಶಕ್ತಿ ಪ್ರದರ್ಶನ

bbbbb
Published on

ಬಿಡದಿ : ರಾಜ್ಯ ಸರ್ಕಾರದ ಹಗರಣ ವಿರೋಧಿಸಿ ಬಿಜೆಪಿ-ಜೆಡಿಎಸ್ ನಾಯಕರು ಶನಿವಾರ ಕೈಗೊಳ್ಳಲಿರುವ ಪಾದಯಾತ್ರೆಗೂ ಮುನ್ನವೇ ಶುಕ್ರವಾರ ಕೈ ನಾಯಕರು ಪಟ್ಟಣದ ಬಿಜಿಎಸ್ ವೃತ್ತದಲ್ಲಿ ಕಾಂಗ್ರೆಸ್‌ನಿಂದ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸುವ ಜತೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ವಿರುದ್ಧ ಹರಿಹಾಯ್ದರು.

ವೇದಿಕೆಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ರಾಮನಗರ ಜಿಲ್ಲೆ ನನ್ನ ಕರ್ಮಭೂಮಿ ಎನ್ನುತ್ತಿದ್ದ ಕುಮಾರಸ್ವಾಮಿ ಬಿಜೆಪಿ ಬಾವುಟದಲ್ಲಿ ಪಾದಯಾತ್ರೆ ಮಾಡುವ ಪರಿಸ್ಥಿತಿ ಬಂದಿದೆ. ಈ ಜಿಲ್ಲೆ ಅವರ ತಂದೆಗೆ ಪ್ರಧಾನಮಂತ್ರಿ ಹುದ್ದೆ ನೀಡಿದೆ, ಕುಮಾರಸ್ವಾಮಿಗೆ ಮುಖ್ಯಮಂತ್ರಿ, ಸಂಸದರ ಹುದ್ದೆ, ಪತ್ನಿಗೆ ಶಾಸಕರ ಹುದ್ದೆ ನೀಡಿದ ಕರ್ಮಭೂಮಿಯಲ್ಲಿ ಜೆಡಿಎಸ್ ಬಾವುಟ ಇಲ್ಲದೆ ಬಿಜೆಪಿ ಬಾವುಟಗಳ ಮಧ್ಯೆ ಪಾದಯಾತ್ರೆ ಮಾಡುವ ಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು.

ಕೆಂಗೇರಿಯಿಂದ ಮೈಸೂರುವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಪಾದಯಾತ್ರೆ ಸಾಗುವ ಬಿಡದಿ, ರಾಮನಗರದಲ್ಲಿ ನಾವು ಗೆದ್ದಿದ್ದೇವೆ, ಚನ್ನಪಟ್ಟಣದಲ್ಲಿ ನೀನು (ಎಚ್‌ಡಿಕೆ) ಗೆದ್ದಿದ್ದೀಯಾ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಮಳವಳ್ಳಿ ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ ಎಂದ ಅವರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ.ಈ ಚುನಾವಣೆಯಲ್ಲಿ ನಾನು ಸ್ವಲ್ಪ ಯಾಮಾರಿದೆ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ವಲ್ಪ ವ್ಯತ್ಯಾಸ ಆಯ್ತು ಎಂದರು.

ನುಡಿದಂತೆ ನಡೆದಿದ್ದೇವೆ :  ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, 2023ರಲ್ಲಿ ಚುನಾವಣೆಗೆ ಹೋಗಿದ್ದ ವೇಳೆ ರಾಜ್ಯದ ಜನತೆಗೆ ಭ್ರಷ್ಟಾಚಾರದ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಿ ಸ್ವಚ್ಛ ಸರ್ಕಾರ ಕೊಡುತ್ತೆವೆ ಎಂದು ಭರವಸೆ ನೀಡಿದ್ದೆವು. ಅಂತೆಯೇ ದೀನ ದಲಿತರ, ಅಲ್ಪಸಂಖ್ಯಾತರ, ಬಡವರ ಪರವಾದ ಆಡಳಿತ ನಡೆಸಲು ಕಾರ್ಯಕ್ರಮ ರೂಪಿಸಿ ನುಡಿದಂತೆ ನಡೆದುಕೊಂಡಿದ್ದೇವೆ. ಅಧಿಕಾರಕ್ಕೆ ಬಂದ ದಿನದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಯಶಸ್ವಿಯಾಗಿದ್ದೇವೆ. ಗ್ಯಾರಂಟಿ ಯೋಜನೆಗೆ ಎಂದು 56 ಸಾವಿರ ಕೋಟಿ ರೂ. ಎರಡನೇ ಬಜೆಟ್‌ನಲ್ಲಿ ಇಡಲಾಗಿದೆ ಎಂದರು.

ಗ್ಯಾರಂಟಿ ಜತೆಗೆ ಅಭಿವೃದ್ಧಿಗೂ ವೇಗ : ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜತೆಗೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇದನ್ನು ಸಹಿಸದೆ ಮೈತ್ರಿ ನಾಯಕರು ಇಲ್ಲಸಲ್ಲದ ಆರೋಪ ಮಾಡಲು ಹೊರಟಿದ್ದಾರೆ. ಜೆಡಿಎಸ್‌ಗೆ ಲಾಟರಿ ಹೊಡೆದು ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗಿದ್ದಾರೆ. ನಮ್ಮ ಜತೆಗೆ ಸೇರಿ ಸರ್ಕಾರ ಮಾಡಿ ಬಿಟ್ಟು ಹೋದರು. ಪಾದಯಾತ್ರೆ ಮಾಡುವ ವಿಚಾರದಲ್ಲಿ ಈಗಾಗಲೇ ಕುಮಾರಸ್ವಾಮಿ ಅವರ ನಡೆ ಗೊತ್ತಾಗುತ್ತಿದೆ. ಮೈತ್ರಿಯ ಡೈವರ್ಸ್ ಬೇಗ ಆಗುತ್ತದೆ ಎಂದು ಡಾ.ಜಿ.ಪರಮೇಶ್ವರ್ ಲೇವಡಿ ಮಾಡಿದರು.

ನೋಟಿಸ್‌ಗೆ ನಾವು ಹೆದರಲ್ಲ : ರಾಜ್ಯಪಾಲರನ್ನು ಇಟ್ಟುಕೊಂಡು ನಮ್ಮನ್ನು ಕಟ್ಟಿ ಹಾಕಲು ಬಿಜೆಪಿ ಯತ್ನಿಸುತ್ತಿದೆ. ಅಬ್ರಹಾಂ ಕೊಟ್ಟ ದೂರನ್ನು ರಾಜ್ಯಪಾಲರು ಪರಿಗಣಿಸಿ, ಸಿಎಂಗೆ ಶೋಕಾಸ್ ನೋಟಿಸ್ ಕೊಡುತ್ತಾರೆ. ನಾವು ಇದಕ್ಕೆ ಹೆದರುವುದಿಲ್ಲ, ಸಚಿವ ಸಂಪುಟದಲ್ಲಿ ರಾಜ್ಯಪಾಲರ ನೋಟಿಸ್‌ಗೆ ಉತ್ತರ ನೀಡಲಾಗಿದೆ. ಸಿದ್ದರಾಮಯ್ಯ, ಡಿಕೆಶಿ ಸೇರಿ ಸಚಿವ ಸಂಪುಟದವರು ಯಾರೂ ತಪ್ಪು ಮಾಡಿಲ್ಲ ಎಂದು ಪರಮೇಶ್ವರ್ ಸಮರ್ಥಿಸಿಕೊಂಡರು.

ಸಚಿವರ ಮಕ್ಕಳ ಖಾತೆಗೆ ಹಣ : ಉನ್ನತ ಶಿಕ್ಷಣ ಇಲಾಖೆ ಸಚಿವ ಸುಧಾಕರ್ ಮಾತನಾಡಿ, ಭೋವಿ ಅಭಿವೃದ್ಧಿ ನಿಗಮದ 50 ಕೋಟಿ ರೂ.ಗಳನ್ನು ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರ ಮಕ್ಕಳ ಖಾತೆಗೆ ಹಣ ವರ್ಗಾವಣೆ ಆಗಿದೆ. ಈ ಬಗ್ಗೆ ತನಿಖೆ ಮಾಡಲಾಗುತ್ತದೆ. ಮುಡಾದಲ್ಲಿ ದೇವೇಗೌಡರ ಕುಟುಂಬದವರಿಗೆ 47 ಸೈಟ್ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು.

ಸರ್ಕಾರದ ವಿರುದ್ಧ ಪ್ರತಿ ಪಕ್ಷಗಳು ವಾಮ ಮಾರ್ಗದಲ್ಲಿ ಒಂದಲ್ಲ ಒಂದು ರೀತಿ ಕುತಂತ್ರ ರಾಜಕೀಯ ಮಾಡುತ್ತಿವೆ. ಮೈತ್ರಿ ಪಕ್ಷಗಳ ಪಾದಯಾತ್ರೆಗೂ ಮೊದಲು ನಾವು ಜನರ ಬಳಿಗೆ ಹೋಗಿ ವಿರೋಧಿಗಳ ವೈಲ್ಯಗಳನ್ನು ಜನರಿಗೆ ತಿಳಿಸಲು ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ನಮ್ಮ ಪ್ರಶ್ನೆಗೆ ಉತ್ತರ ನೀಡಲಿ : ಮೈತ್ರಿ ಪಾದಯಾತ್ರೆ ವೇಳೆ ಬಿಜೆಪಿಯ ಭ್ರಷ್ಟಾಚಾರ, ಜೆಡಿಎಸ್‌ನ ಕುಟುಂಬ ಆಸ್ತಿ ಅಕ್ರಮದ ಬಗ್ಗೆ ನಾವು ಪ್ರಶ್ನೆ ಕೇಳುತ್ತಿದ್ದೇವೆ. ಇದಕ್ಕೆ ಅವರು ಪಾದಯಾತ್ರೆ ವೇಳೆ ಜನರಿಗೆ ಉತ್ತರ ನೀಡಬೇಕಿದೆ. ಮುಡಾ ವಿಚಾರದಲ್ಲಿ ಇಲ್ಲ ಸಲ್ಲದ ಆರೋಪವನ್ನು ನಮ್ಮ ಸಿದ್ದರಾಮಯ್ಯ ಅವರ ಮೇಲೆ ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಅವರು ಎಳ್ಳಷ್ಟೂ ಅಧಿಕಾರ ದುರುಪಯೋಗ ಮಾಡಿಲ್ಲ ಎಂದರು.

ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ಅಧಿಕಾರ ಉಳಿಸಿಕೊಳಲು ಕೇಂದ್ರ ಸರ್ಕಾರ ಅನುದಾನ ಕೊಟ್ಟಿದೆ. ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ರಾಜ್ಯಕ್ಕೆ ಅಭಿವೃದ್ಧಿ ವಿಚಾರದಲ್ಲಿ ಅನ್ಯಾಯ ಮಾಡಲಾಗಿದೆ ಎಂದು ಆರೋಪ ಮಾಡಿದರು.

ಸಿದ್ದರಾಮಯ್ಯ ಅಕ್ರಮ ಮಾಡಿಲ್ಲ: ಸಿಎಂ ಆಗಿದ್ದ ವೇಳೆ ಜೈಲಿಗೆ ಹೋದವರು ಯಾರಾದರೂ ಇದ್ದರೆ ಅದು ಯಡಿಯೂರಪ್ಪ ಮಾತ್ರ. ಇದನ್ನು ವಿಜಯೇಂದ್ರ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕೆಂದು ವಸತಿ ಸಚಿವ ಜಮ್ಮಿರ್ ಅಹಮದ್ ಖಾನ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಕುಟುಕಿದರು.

ಯಾವ ಕಾರಣಕ್ಕೆ ಬಿಜೆಪಿ - ಜೆಡಿಎಸ್ ನಾಯಕರು ಪಾದಯಾತ್ರೆ ಮಾಡುತ್ತಿದ್ದೀರಿ ಎಂದು ಜನರು ಕೇಳಬೇಕು. ನಮ್ಮ ಅಧಿಕಾರವನ್ನು ಸಹಿಸಿಕೊಳ್ಳದೆ ಮೈತ್ರಿ ನಾಯಕರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. 5 ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತಂದು ಯಶಸ್ವಿಯಾಗಿದ್ದೇವೆ. ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಏನೂ ಸಿಕ್ಕಿಲ್ಲ. ಹಾಗಾಗಿ ಮುಡಾದಲ್ಲಿ ಏನೋ ಸಿಗುತ್ತೆ ಎಂದು ಪಾದಯಾತ್ರೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಯಾವುದೇ ಅಕ್ರಮ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.

ನೀರಾವರಿಯಲ್ಲಿ ಅನ್ಯಾಯ: ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಅಗುತ್ತಿದೆ. ಇದನ್ನು ಸರಿಪಡಿಸುತ್ತೇನೆ ಎಂದು ಕೇಂದ್ರ ಮಂತ್ರಿಯಾದ ಕುಮಾರಸ್ವಾಮಿ ಮೇಕೆದಾಟು ಯೋಜನೆ ಸೇರಿ ರಾಜ್ಯಕ್ಕೆ ಯಾವುದೇ ಒಂದು ಯೋಜನೆಯನ್ನೂ ಘೋಷಣೆ ಮಾಡಿಸಲಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಜನಾಂದೋಲನ ಸಮಾವೇಶದಿಂದ ಮಾಡಲಾಗುತ್ತಿದೆ. ಒಂದು ವಿಚಾರದ ಬಗ್ಗೆ ಒಮ್ಮೆ ಹೋರಾಟ ಮಾಡಬೇಕು. ಅದನ್ನು ಬಿಟ್ಟು ಎರಡೆರಡು ಬಾರಿ ಹೋರಾಟ ಮಾಡುತ್ತಿದ್ದಾರೆ. ವಾರಕ್ಕೆ ಒಮ್ಮೆ ಕುಮಾರಸ್ವಾಮಿ ರಾಜ್ಯಕ್ಕೆ ಬಂದು ಹೋಗುವುದೇ ಅವರ ಸಾಧನೆ ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net