

ವಿಜಯವಾಣಿ ಸುದ್ದಿಜಾಲ ಕಾನಹೊಸಹಳ್ಳಿ
ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವ ರೈತ ಸಂಪರ್ಕ ಕೇಂದ್ರ ಜನ ಸ್ನೇಹಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಜಿಲ್ಲೆಯಲ್ಲೇ ಮಾದರಿ ಕೇಂದ್ರವಾಗಬೇಕು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿ ನಿರ್ಮಿಸಿದ್ದ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ರೈತ ಸಮೂಹಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಸರಿಯಾದ ರೀತಿಯಲ್ಲಿ ತಲುಪಿಸಬೇಕು. ಉತ್ತಮ ತಳಿಯ ಬಿತ್ತನೆ ಬೀಜ, ಗೊಬ್ಬರ ರಿಯಾಯಿತಿ ದರದಲ್ಲಿ ವಿತರಣೆ ಮಾಡಬೇಕು ಎಂದರು.
ಇದನ್ನೂ ಓದಿ: ಕೆರೆಗೆ ನೀರು ತುಂಬಿಸಲು ರೈತರು ಸಹಕಾರ ಅಗತ್ಯ
ಹಿಂದಿನ ಶಾಸಕ ಎನ್.ವೈ.ಗೋಪಾಲಕೃಷ್ಣರ ಅವಧಿಯಲ್ಲಿ ಜಾರಿಗೊಂಡಿರುವ 80 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ನನೆಗುದಿಗೆ ಬಿದ್ದಿಲ್ಲ, ಸದ್ಯ ಪ್ರಗತಿಯಲ್ಲಿದೆ.
ಕೆರೆಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಶೇ.90ರಷ್ಟು ಮುಗಿದಿದೆ. ಹೂವಿನಹಡಗಲಿ, ಗುಡೇಕೋಟೆ ಬಳಿಯ ಅರಣ್ಯ ಪ್ರದೇಶದಲ್ಲಿ ಪೈಪ್‌ಲೈನ್ ಕಾಮಗಾರಿ ಬಾಕಿಯಿದೆ. ಅರಣ್ಯ ಇಲಾಖೆಯಿಂದ ಅನುಮತಿ ದೊರೆತ ತಕ್ಷಣ ಯೋಜನೆ ಪೂರ್ಣಗೊಂಡು ಕೆರೆಗೆ ನೀರು ಹರಿಯಲ್ಲಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಎಂ.ಟಿ.ಸುನೀಲ್ ಕುಮಾರ್ ಮಾತನಾಡಿದರು. ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎಂ.ಜಿ.ಸಿದ್ದನಗೌಡ, ಸಹಾಯಕ ಕೃಷಿ ಅಧಿಕಾರಿ ಗುರುಬಸವರಾಜ ಚಿಲಗೋಡು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಕುಮಾರಗೌಡ, ತಾಪಂ ಮಾಜಿ ಸದಸ್ಯ ಗುರುಸಿದ್ದನಗೌಡ, ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಬಣವಿಕಲ್ಲು ಎರಿಸ್ವಾಮಿ, ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ್, ರಾಮಕೃಷ್ಣ ಬಂಡ್ರಿ, ರಾಕೇಶ್ ಇತರರಿದ್ದರು.