

ಹಾವೇರಿ: ಕರೊನಾ ಸೋಂಕು ಹರಡಿದ ನಂತರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರ ಸಂಖ್ಯೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ.
ಜಿಲ್ಲೆಯಲ್ಲಿ ತಿಂಗಳಿಗೆ ಸರಾಸರಿ 900 ಮಹಿಳೆಯರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದರು. ಆದರೆ, ಕರೊನಾ ವೈರಸ್ ಹರಡುವಿಕೆ ಆರಂಭಗೊಂಡ ಏಪ್ರಿಲ್ನಿಂದ ಮೇ ಅಂತ್ಯದವರೆಗೆ ಜಿಲ್ಲೆಯಲ್ಲಿ ಕೇವಲ 549 ಅಂದರೆ, ಪ್ರತಿ ತಿಂಗಳಿಗೆ 274ರಷ್ಟು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳು ನಡೆದಿವೆ. ಮೊದಲಿನ ಸರಾಸರಿಗೆ ಹೋಲಿಸಿದರೆ ಶೇ. 25ರಷ್ಟು ಮಹಿಳೆಯರು ಮಾತ್ರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಸಿಜೇರಿಯನ್ ಹೆರಿಗೆಗೆ ಒಳಗಾದವರಿಗೆ ಮಾತ್ರ: ಇನ್ನೊಂದು ವಿಶೇಷವೆಂದರೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆದಿರುವ 549 ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗಳು ಪ್ರತ್ಯೇಕವಾಗಿ ನಡೆದಿಲ್ಲ. ಹೆರಿಗೆಯ ವೇಳೆಯಲ್ಲಿ ಸಿಜೇರಿಯನ್ ಆದ ಮಹಿಳೆಯರ ಕುಟುಂಬದವರ ಸಮ್ಮತಿ ಮೇರೆಗೆ ಮಾತ್ರ ಈ ಶಸ್ತ್ರಚಿಕಿತ್ಸೆಗಳಾಗಿವೆ. ಸಾಮಾನ್ಯ ಹೆರಿಗೆಯಾದವರಿಗೆ ಹಾಗೂ ಹೆರಿಗೆಯಾಗಿ ಬಹುದಿನಗಳ ನಂತರ ಪ್ರತ್ಯೇಕವಾಗಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರಿಗೆ ಈ ಎರಡು ತಿಂಗಳ ಅವಧಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಲ್ಲ.
ಒಂದು ಅಥವಾ ಎರಡು ಮಕ್ಕಳು ಸಾಕು ಎನ್ನುವವರು ಸಾಮಾನ್ಯ ಹೆರಿಗೆಯ ವರ್ಷದ ನಂತರ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಕರೊನಾ ವೈರಸ್ ನಿಯಂತ್ರಿಸಲು ಸರ್ಕಾರ ಲಾಕ್ಡೌನ್ ಘೊಷಿಸಿತ್ತು. ಈ ಸಮಯದಲ್ಲಿ ಎಲ್ಲರೂ ಮನೆಯಲ್ಲಿಯೇ ಇರುವಂತಾಗಿತ್ತು. ಈ ವೇಳೆ ಮಿತ ಕುಟುಂಬ ಕಲ್ಯಾಣ ಯೋಜನೆ ಪಾಲಿಸುವಲ್ಲಿ ಹಲವರು ವಿಫಲರಾಗಿದ್ದಾರೆ. ಹೀಗಾಗಿ, ಮಹಿಳೆಯರು ಮತ್ತೆ ಗರ್ಭ ಧರಿಸಿರುವ ಉದಾಹರಣೆಗಳು ಸಾಕಷ್ಟಿವೆ. ಕೆಲವರು ಈಗ ಮಗು ಬೇಡವಾಗಿತ್ತು. ಗರ್ಭಪಾತ ಮಾಡಿಸಲು ಸಾಧ್ಯವೇ ಎಂದು ಆಪ್ತ ವೈದ್ಯರಲ್ಲಿ ಸಲಹೆ ಕೇಳುತ್ತಿದ್ದಾರೆ. ಆದರೆ, ವೈದ್ಯರು ಗರ್ಭಪಾತ ಅಪರಾಧವಾಗಿದೆ. ಮಗು ಜನಿಸಲಿ ಎಂದು ಸೂಚಿಸಿ ಕಳಿಸುತ್ತಿದ್ದಾರೆ. ಆದರೂ ಒತ್ತಾಯ ಮಾಡುವವರಿಗೆ ಕೌನ್ಸೆಲಿಂಗ್ ಮಾಡಿಸಿ ತಿಳಿವಳಿಕೆ ಮೂಡಿಸಲಾಗಿದೆ ಎಂದು ಖಾಸಗಿ ವೈದ್ಯರೊಬ್ಬರು ಹೇಳುತ್ತಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಸದ್ಯಕ್ಕಿಲ್ಲ ಶಸ್ತ್ರಚಿಕಿತ್ಸೆ: ಸದ್ಯ ಲಾಕ್ಡೌನ್ ತೆರವುಗೊಂಡಿರುವುದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಬಹುಬೇಡಿಕೆಯಿದೆ. ಆದರೆ, ಜಿಲ್ಲೆಯಲ್ಲಿ ಅತಿಹೆಚ್ಚು ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ಜಿಲ್ಲಾಸ್ಪತ್ರೆಯಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಹೆರಿಗೆ ಸೇರಿ ತುರ್ತು ಶಸ್ತ್ರಚಿಕಿತ್ಸೆಗಳನ್ನು ಮಾತ್ರ ಮಾಡಲಾಗುತ್ತಿದೆ. ಅಲ್ಲದೆ, ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿಯೂ ತುರ್ತು ಶಸ್ತ್ರಚಿಕಿತ್ಸೆಗಳನ್ನು ಮಾತ್ರ ನಡೆಸಲಾಗುತ್ತಿದೆ. ಹೀಗಾಗಿ, ಸರ್ಕಾರಿ ಆಸ್ಪತ್ರೆಯಲ್ಲಿ ಮಾರ್ಚ್ ಅಂತ್ಯದಿಂದ ಜೂನ್ವರೆಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳನ್ನು ನಡೆಸಿಲ್ಲ.
ಖಾಸಗಿ ಆಸ್ಪತ್ರೆಯಲ್ಲೂ ಮಾಡುತ್ತಿಲ್ಲ: ಕರೊನಾ ವೈರಸ್ ಹರಡುವಿಕೆಯ ಭಯದಿಂದ ಖಾಸಗಿ ಆಸ್ಪತ್ರೆಗಳಲ್ಲಿಯೂ ತುರ್ತು ಚಿಕಿತ್ಸೆಗಳನ್ನು ಹೊರತುಪಡಿಸಿ ಸಂತಾನ ಶಕ್ತಿ ಹರಣ ಸೇರಿ ಯಾವುದೇ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಿಲ್ಲ. ಯಾವುದೇ ಶಸ್ತ್ರಚಿಕಿತ್ಸೆ ಮಾಡಬೇಕಾದರೂ ಅದಕ್ಕೂ ಮೊದಲು ಕರೊನಾ ಟೆಸ್ಟ್ ಅನ್ನು ಖಾಸಗಿಯವರು ಕಡ್ಡಾಯಗೊಳಿಸಿರುವುದರಿಂದ ಜನರು ಅದಕ್ಕೆ ನಿರಾಕರಿಸಿ ಶಸ್ತ್ರಚಿಕಿತ್ಸೆಯನ್ನು ಮುಂದೂಡುತ್ತಿದ್ದಾರೆ.
2019ರ ಏಪ್ರಿಲ್ನಿಂದ 2020ರ ಮಾರ್ಚ್ವರೆಗೆ ಜಿಲ್ಲೆಯಲ್ಲಿ ಪುರುಷ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯ ಗುರಿ 275ರಷ್ಟಿತ್ತು. ಇದರಲ್ಲಿ ಕೇವಲ 5 ಜನರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. 12,404 ಮಹಿಳಾ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುವ ಗುರಿ ಹೊಂದಿದ್ದು, 10,802ರಷ್ಟು ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 2020ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 2,300 ಶಸ್ತ್ರಚಿಕಿತ್ಸೆಯ ಗುರಿ ಹೊಂದಲಾಗಿತ್ತು. ಆದರೆ, ಕರೊನಾದಿಂದ ಈ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಹಾವೇರಿ ಜಿಲ್ಲಾಸ್ಪತ್ರೆ ಹಾಗೂ ರಾಣೆಬೆನ್ನೂರ ತಾಲೂಕು ಆಸ್ಪತ್ರೆಯಲ್ಲಿ ಪ್ರತಿವರ್ಷ ಅತಿಹೆಚ್ಚು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳು ನಡೆಯುತ್ತಿದ್ದವು. 2019ರಲ್ಲಿ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ 1,995, ರಾಣೆಬೆನ್ನೂರ ತಾಲೂಕು ಆಸ್ಪತ್ರೆಯಲ್ಲಿ 2,534, ಬ್ಯಾಡಗಿಯಲ್ಲಿ 1,042, ಹಿರೇಕೆರೂರ 1,337, ಸವಣೂರ 1,194, ಶಿಗ್ಗಾಂವಿ 1,316, ಹಾನಗಲ್ಲ 1,384 ಶಸ್ತ್ರಚಿಕಿತ್ಸೆಗಳಾಗಿವೆ.
ಕರೊನಾ ವೈರಸ್ ನಿಯಂತ್ರಣದ ಉದ್ದೇಶದಿಂದ ಸರ್ಕಾರ ತುರ್ತು ಚಿಕಿತ್ಸೆಗಳಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡಿದೆ. ಅಲ್ಲದೆ, ಅನೇಕ ವೈದ್ಯರು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಸ್ವಲ್ಪ ವಿಳಂಬವಾಗಿಯಾದರೂ ಮಾಡಬಹುದು. ಅಲ್ಲದೆ, ಅನೇಕರು ಕರೊನಾ ಭಯದಿಂದ ಈಗ ಶಸ್ತ್ರಚಿಕಿತ್ಸೆಗೆ ಬರುತ್ತಿಲ್ಲ. ಸರ್ಕಾರವು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಇನ್ನೂ ಸೂಚನೆ ನೀಡಿಲ್ಲ. ಈ ಕುರಿತು ಸರ್ಕಾರದಿಂದ ಸೂಚನೆ ಬಂದ ಕೂಡಲೆ ಅವುಗಳನ್ನು ಆರಂಭಿಸುತ್ತೇವೆ. | ಡಾ. ರಾಜೇಂದ್ರ ದೊಡ್ಡಮನಿ, ಡಿಎಚ್ಒ ಹಾವೇರಿ