ಜನವರಿಯಿಂದ ತಾಜ್ಯ ಮರು ಬಳಕೆ ಕಾರ್ಯ ಆರಂಭ

25 HANUR 4
Published on

ಹನೂರು: ಮಲೆಮಹದೇಶ್ವರ ಬೆಟ್ಟದಲ್ಲಿ ಜಾರಿಗೊಳಿಸಿರುವ ‘ಹಸಿರು ನಾಳೆ ಮಲೆಮಹದೇಶ್ವರ ಬೆಟ್ಟ’ ಯೋಜನೆ ಯಶಸ್ವಿಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಕೋರಿದರು.

ತಾಲೂಕಿನ ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಮಂಗಳವಾರ ಯೋಜನೆಯ ಸಮರ್ಪಕ ಅನುಷ್ಠಾನ ಸಂಬಂಧ ಆಯೋಜಿಸಿದ್ದ ಅಧಿಕಾರಿಗಳು ಹಾಗೂ ನೌಕರರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮ.ಬೆಟ್ಟದಲ್ಲಿ ಪ್ರಾಧಿಕಾರ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿದರೂ ತ್ಯಾಜ್ಯ ನಿರ್ವಹಣೆ ಸವಾಲಿನ ಕೆಲಸವಾಗಿತ್ತು. ಹಾಗಾಗಿ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಉದ್ದೇಶದಿಂದ ಮೈಕಾಪ್ಸ್ ಸಹಯೋಗದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಕ್ಷೇತ್ರದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿಗೊಳಿಸುವುದರ ಮೂಲಕ ಮರುಬಳಕೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕಿದೆ ಎಂದು ತಿಳಿಸಿದರು.

ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು ಯೋಜನೆ ಸಮರ್ಪಕ ಅನುಷ್ಠಾನ ಸಂಬಂಧ ನೀಡಿರುವ ಅಗತ್ಯ ಸೂಚನೆಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಪೌರಕಾರ್ಮಿಕರಿಗೆ ನೀಡುತ್ತಿರುವ ತರಬೇತಿಯನ್ನು ಸರಿಯಾಗಿ ಮನದಟ್ಟು ಮಾಡಿಕೊಂಡು ಹಸಿ ಹಾಗೂ ಒಣ ಕಸ ಬೇರ್ಪಡಿಸಬೇಕು. ಪ್ಲಾಸ್ಟಿಕ್, ಚಪ್ಪಲಿ, ಒಣ ಎಲೆಗಳನ್ನು ಪ್ರತ್ಯೇಕಿಸುವುದರ ಮೂಲಕ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಮರುಬಳಕೆಗೆ ಬರುವಂತೆ ನೋಡಿಕೊಳ್ಳಬೇಕು ಎಂದರು.

ಮೈಕಾಪ್ಸ್ ಸಂಸ್ಥೆಯು ತ್ಯಾಜ್ಯ ಮರುಬಳಕೆ ಕಾರ್ಯವನ್ನು ಜನವರಿಯಿಂದ ಆರಂಭಿಸಲಿದೆ. ಇದರಿಂದ ಬರುವ ಆದಾಯವನ್ನು ಪೌರಕಾರ್ಮಿಕರಿಗೆ ವಿನಿಯೋಗಿಸಲಾಗುವುದು. ಕ್ಷೇತ್ರದಲ್ಲಿ ಸಂಗ್ರಹವಾಗುವ ಚಪ್ಪಲಿ, ಬಟ್ಟೆಯನ್ನು ಸಿಮೆಂಟ್ ಕಂಪನಿಗೆ ನೀಡಲಾಗುವುದು. ದಾಸೋಹ ಭವನದಲ್ಲಿ ಸಂಗ್ರಹವಾಗುವ ವ್ಯರ್ಥ ಆಹಾರ ಪದಾರ್ಥದಿಂದ ಬಯೋಗ್ಯಾಸ್ ಹಾಗೂ ಒಣ ಎಲೆಗಳಿಂದ ಗೋಬರ್ ಗ್ಯಾಸ್ ತಯಾರಿಸಲು ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಮೈಕಾಪ್ಸ್ ಸಂಸ್ಥೆ ನಿರ್ದೇಶಕ ಅಶ್ರಫ್, ಆರ್‌ಎಫ್‌ಒ ಅಮಿತ್, ಪ್ರಾಧಿಕಾರದ ನೌಕರರು, ಪೌರಕಾರ್ಮಿಕರು, ಮೈರಾಡ ಸಂಸ್ಥೆಯ ಪ್ರತಿನಿಧಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net