18 ತಿಂಗಳು ಶಿರಸಿ-ಕುಮಟಾ ರಸ್ತೆ ಬಂದ್

9sirsi4
Published on

ಶಿರಸಿ/ಕಾರವಾರ: ಶಿರಸಿ-ಕುಮಟಾ ಹೆದ್ದಾರಿಯಲ್ಲಿ ಅ.12 ರಿಂದ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಶಿರಸಿ-ಕುಮಟಾ-ಬೇಲೆಕೇರಿ ರಾಷ್ಟ್ರೀಯ ಹೆದ್ದಾರಿ 766 ಇಇ ವಿಸ್ತರಣೆ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಈ ದಿನಾಂಕದಿಂದ ಮುಂದಿನ 18 ತಿಂಗಳ ಅವಧಿಯವರೆಗೆ ಶಿರಸಿಯಿಂದ ಕುಮಟಾ ಹಾಗೂ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬೇಲೆಕೇರಿ ಕ್ರಾಸ್​ನಿಂದ (ಅಂಕೋಲಾ) ಬೇಲೆಕೇರಿವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜನರಿಗೆ ಸಮಸ್ಯೆ ಆಗದ ರೀತಿಯಲ್ಲಿ ಪರ್ಯಾಯ ಮಾರ್ಗಗಳನ್ನು ಸೂಚಿಸುವುದು ಆಯಾ ಪಂಚಾಯಿತಿ ವ್ಯಾಪ್ತಿಯ ಪಿಡಿಒಗಳ ಜವಾಬ್ದಾರಿಯಾಗಿದೆ ಎಂದು ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಹೇಳಿದರು.

ಉದ್ದೇಶಿತ ಶಿರಸಿ- ಕುಮಟಾ ಮಾರ್ಗದ ಮೇಲ್ದರ್ಜೆ ಕಾಮಗಾರಿ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಸಂಚಾರ ಬಂದ್ ಮಾಡುವ ಕಾರಣ ಪರ್ಯಾಯ ಮಾರ್ಗಗಳನ್ನು ಹುಡುಕಲು ನಗರದ ಮಿನಿ ವಿಧಾನಸೌಧದಲ್ಲಿ ಗುರುವಾರ ಪಿಡಿಒ ಹಾಗೂ ಇತರ ಅಧಿಕಾರಿಗಳ ಸಭೆ ಕರೆದು ಅವರು ಮಾತನಾಡಿದರು. ಶಿರಸಿ- ಕುಮಟಾ ರಸ್ತೆ ವಿಸ್ತರಣೆಗೆ ಆದೇಶವಾಗಿದ್ದು, ಶೀಘ್ರದಲ್ಲಿ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಲಿದ್ದು, ಪರ್ಯಾಯ ಮಾರ್ಗಗಳನ್ನು ಸೂಚಿಸುವುದು ತುರ್ತಾಗಿ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ವ ಪರ್ಯಾಯ ಮಾರ್ಗಗಳನ್ನು ಗುರುತಿಸುವ ಕಾರ್ಯ ಆಗಬೇಕು. ಆಯಾ ಪಂಚಾಯಿತಿಗಳ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಆಯಾ ಪಂಚಾಯಿತಿ ಪಿಡಿಒಗಳು ಗಮನ ಹರಿಸಬೇಕು ಎಂದರು.

ಡಿಪೋ ವ್ಯವಸ್ಥಾಪಕ ಸಿದ್ದು ಕಂಕನವಾಡಿ ಸಭೆಗೆ ಮಾಹಿತಿ ನೀಡಿ, ಶಿರಸಿಯಿಂದ ಕುಮಟಾ, ಕಾರವಾರ ಮಾರ್ಗದಲ್ಲಿ ನಿತ್ಯ 183 ಬಸ್ ಗಳು ಸಂಚರಿಸುತ್ತಿವೆ. ದೇವನಳ್ಳಿ- ವಡ್ಡಿ- ಮಾರ್ಗವಾಗಿ ಬಸ್ ಬಿಟ್ಟರೆ ಅನುಕೂಲ ಆಗಲಿದೆ. ಆದರೆ, ಗ್ರಾಮೀಣ ಸಾರಿಗೆಗೆ ಸ್ವಲ್ಪ ಸಮಸ್ಯೆ ಆಗಲಿದೆ. ಶಿರಸಿ- ಕಾನಸೂರು ಮಾರ್ಗವಾಗಿ ಹೆರೂರು, ಗೋಳಿಮಕ್ಕಿ, ಹೆಗ್ಗರಣಿ, ಅಮ್ಮೀನಳ್ಳಿ, ಶಿರಸಿ- ಬಂಡಲ, ಶಿರಸಿ- ಹೆಗಡೆಕಟ್ಟಾ, ಮಂಜುಗುಣಿ ಮಾರ್ಗಗಳ ಮೂಲಕ ಬಸ್ ಸಂಚಾರ ಕೈಗೊಂಡರೆ ಸಮಸ್ಯೆಗೆ ಪರಿಹಾರ ಸಾಧ್ಯ ಎಂದರು.

ಪಿಡಿಒ ಕುಮಾರವಾಸನ್ ಮಾತನಾಡಿ, ಕಾಮಗಾರಿ ನಡೆಯುವ ರಸ್ತೆಯುದ್ದಕ್ಕೂ 4-5 ಪಂಚಾಯಿತಿಗಳು ಸಿಗುತ್ತವೆ. ಕಾಮಗಾರಿಯಿಂದ ನೀರಿನ ಕಾಮಗಾರಿ ಹಾಗೂ ಇಂಟರ್ ನೆಟ್ ಸೌಲಭ್ಯಕ್ಕೆ ತೊಡಕಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಗುತ್ತಿಗೆದಾರರಿಗೆ ಎಚ್ಚರಿಸಬೇಕು ಎಂದರು.

ಈ ವೇಳೆ ಸಿಪಿಐ ಪ್ರದೀಪ ಬಿ.ಯು., ಆರ್​ಎಫ್​ಒಗಳಾದ ಬಸವರಾಜ ಬೋಚಳ್ಳಿ, ಪವಿತ್ರಾ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net