ಜನರಿಗೆ ಕಾಯ್ದೆಗಳ ಅರಿವು ಅಗತ್ಯ

IMG-20241103-WA0127
Published on

ಅರಸೀಕೆರೆ (ಗ್ರಾಮಾಂತರ): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ತಮ್ಮ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟುವ ಉದ್ದೇಶದಿಂದ ಜಾರಿಯಲ್ಲಿರುವ ಕಾಯ್ದೆಗಳ ಬಗ್ಗೆ ಅರಿವು ಹೊಂದಬೇಕು ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಪರಶಿವಮೂರ್ತಿ ತಿಳಿಸಿದರು.

ಅಗ್ಗುಂದ ಗ್ರಾಮದಲ್ಲಿ ಅಸ್ಪೃಶ್ಯತೆ ನಿವಾರಣಾ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬುಧವಾರ ಆಯೋಜಿಸಿದ್ದ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದವರು ಕಾಯ್ದೆಗಳನ್ನು ಅರ್ಥ ಮಾಡಿಕೊಂಡಾಗ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುತ್ತವೆ. ಈ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದರು.

ಕರ್ನಾಟಕ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಅರಸೀಕೆರೆ ತಾಲೂಕು ಅಧ್ಯಕ್ಷ ಎ.ಪಿ.ಚಂದ್ರಯ್ಯ ಮಾತನಾಡಿ, ಎಲ್ಲರೂ ಜಾತಿ, ಧರ್ಮಗಳಿಂದ ಹೊರಬಂದು ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ. ಇದನ್ನು ಹೋಗಲಾಡಿಸಲು ಬೀದಿ ನಾಟಕದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಆಗ್ಗುಂದ ಪಿಡಿಒ ಮಂಜುಳಾ, ಕಾರ್ಯದರ್ಶಿ ಕೊಟ್ಟೂರಪ್ಪ, ಸಮಾಜ ಕಲ್ಯಾಣ ಇಲಾಖೆ ಮೇಲ್ವಿಚಾರಕರಾದ ವೀಣಾ, ಎ.ಜೆ.ಸತೀಶ್, ಮುಖಂಡ ಎ.ಆರ್. ಚಂದ್ರಶೇಖರ್, ಹೇಮಂತ್ ಕುಮಾರ್ ಇದ್ದರು. ಅಗ್ಗುಂದ ಹೊಯ್ಸಳ ಕಲಾತಂಡದಿಂದ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net