

ಎನ್.ಆರ್.ಪುರ: ಮಳೆ ಹೆಚ್ಚಾಗುತ್ತಿದ್ದಂತೆ ಪಟ್ಟಣ ಹಾಗೂ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಮದ್ರಾಸ್ ಕಣ್ಣಿನ ಬೇನೆ ವ್ಯಾಪಕವಾಗಿ ಹರುಡುತ್ತಿದೆ.
ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ಉರಿ, ಕಣ್ಣಿನಲ್ಲಿ ನೀರು ಬರುತ್ತಿದ್ದು ಹಲವರು ಕಪ್ಪು ಕನ್ನಡಕ ಹಾಕಿಕೊಂಡು ಹೊರಗೆ ಬರುತ್ತಿದ್ದಾರೆ. ಕೆಲವು ಮನೆಗಳಲ್ಲಿ ಕುಟುಂಬದ ಎಲ್ಲರಿಗೂ ಮದ್ರಾಸ್ ಕಣ್ಣಿನ ಕಾಯಿಲೆ ಹರಡಿದೆ. ಮಕ್ಕಳು 2-3 ದಿನ ಶಾಲೆಗೆ ಹೋಗದೆ ಮನೆಯಲ್ಲಿ ಇದ್ದಾರೆ. ಕೆಲವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಮದ್ರಾಸ್ ಕಣ್ಣಿನ ಬೇನೆ ವೈರಸ್‌ನಿಂದ ಬರುವ ಕಾಯಿಲೆ. ಕಣ್ಣಿನ ಕಾಯಿಲೆ ಕಾಣಿಸಿಕೊಂಡವರಿಗೆ 11 ದಿನ ವೈರಸ್ ಇರುವುದರಿಂದ ಬೇರೆಯವರಿಂದ ದೂರವಿರಬೇಕು ಎಂದು ಸರ್ಕಾರಿ ಆಸ್ಪತ್ರೆ ನೇತ್ರತಜ್ಞೆ ಡಾ. ರಂಜನಿ ಹೇಳಿದ್ದಾರೆ.
ಕಣ್ಣನ್ನು ಮುಟ್ಟಿದಾಗ ಸೋಪಿನಲ್ಲಿ ಆಗಾಗ ಕೈ ತೊಳೆದುಕೊಳ್ಳಬೇಕು. ರೋಗ ಪೀಟಿತ ಕಣ್ಣನ್ನು ಮುಟ್ಟಿದವರು ಲೋಟ, ಪಾತ್ರೆ ಇತರ ವಸ್ತುಗಳನ್ನು ಮುಟ್ಟಿದರೆ ಅದರ ಮೂಲಕ ಬೇರೆಯವರಿಗೆ ಹರಡುವ ಸಾಧ್ಯತೆ ಇದೆ. ರೋಗಿಗಳು ಉಪಯೋಗಿಸಿದ ಟವಲ್, ತಲೆ ದಿಂಬುಗಳನ್ನು ಇತರರು ಉಪಯೋಗಿಸಬಾರದು ಎಂದು ತಿಳಿಸಿದ್ದಾರೆ. ವಿಶೇಷವಾಗಿ 2-3 ದಿನ ಕಣ್ಣಿನಲ್ಲಿ ಉರಿ, ಕೆಂಪಾಗುವುದು, ಕಣ್ಣೀರು ಬರುವುದು ಇದರ ಲಕ್ಷಣ. ಹಲವರಿಗೆ ಕಣ್ಣಿನ ಬೇನೆ ಬಂದಾಗ ಶೀತ, ಜ್ವರ ಸಹ ಬರುತ್ತದೆ. ಕಣ್ಣಿನ ಬೇನೆ ಕಾಣಿಸಿಕೊಂಡವರು ತಕ್ಷಣ ನೇತ್ರ ತಜ್ಞರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ರೋಗ ಬಂದವರು ಇತರರಿಗೆ ರೋಗ ಹರಡದಂತೆ ಕಪ್ಪು ಕನ್ನಡಕ ಧರಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.