

ಕಾರವಾರ: ಕರೊನಾ ಸೋಂಕಿನ ಪ್ರಕರಣಗಳ ನಿಯಂತ್ರಣಕ್ಕೆ ತರಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಪಟ್ಟಣ ಪ್ರದೇಶದಲ್ಲಿ ಹೆಚ್ಚಿದ್ದ ಸೋಂಕಿನ ಪ್ರಕರಣಗಳು ಈಗ ಹಳ್ಳಿ ಹಳ್ಳಿಯನ್ನೂ ವ್ಯಾಪಿಸಿದೆ. ಹಿನ್ನೆಲೆಯಲ್ಲಿ ಕೆಲ ತುರ್ತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಇದೆ. ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ವಾರಂಟೈನ್ ಸೆಂಟರ್ ತೆರೆಯಬೇಕು. ಇದಕ್ಕಾಗಿ ಹಾಸ್ಟೇಲ್, ಸಭಾಭವನ, ಇತರ ಕಟ್ಟಡವನ್ನು ಬಳಸಿಕೊಳ್ಳಬೇಕು. ಸೋಂಕಿತರು ಮನೆಯಲ್ಲೇ ಇರುವುದರಿಂದ ಯಾರು ಸೋಂಕಿತರು ಎನ್ನುವುದು ಗೊತ್ತಾಗದೆ ಅವರ ಮನೆಗಳಿಗೂ ಕೆಲವರು ಹೋಗುವುದರಿಂದ ಅವರಿಗೂ ಸೋಂಕು ಹರಡುವ ಸಾಧ್ಯತೆ ಇದೆ. ಕೆಲ ಸೋಂಕಿತರು ಅಲ್ಲಿಲ್ಲಿ ತಿರುಗಾಡುತ್ತಿರುವುದೂ ಬೆಳಕಿಗೆ ಬಂದಿದೆ. ಇದರಿಂದ ಸೋಂಕಿತರ ಮನೆಗೆ ಬೋರ್ಡ್ ಅಂಟಿಸಬೇಕು. ಚಿಕ್ಕ ಮಕ್ಕಳಿಗೆ ಕರೊನಾ ಸೋಂಕು ಕಂಡುಬಂದಲ್ಲಿ ಅವರ ಆರೈಕೆಗೆ ಪ್ರತ್ಯೇಕ ಕೇಂದ್ರವನ್ನು ಆರಂಭಿಸಬೇಕು. ಮಕ್ಕಳ ಜತೆ ಪಾಲಕರೂ ಇರುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಆರೋಗ್ಯ ಸಮೀಕ್ಷೆ ನಡೆಸಲಿ: ಈ ಹಿಂದೆ ಜಿಲ್ಲಾದ್ಯಂತ ನಡೆಸಿದಂತೆ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಈಗ ಆರೋಗ್ಯ ಸಮೀಕ್ಷೆ ನಡೆಯಬೇಕಿದೆ. ನಮ್ಮ ಕ್ಷೇತ್ರದ ಜನತೆ ನೆಮ್ಮದಿಯಿಂದ ಇರಬೇಕಾದರೆ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಅನಿವಾರ್ಯವಾಗಿ ಕೈಗೊಳ್ಳಲೇಬೇಕಾಗಿದೆ. ಈಗಾಗಲೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದು, ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಉಸ್ತುವಾರಿ ಕಾರ್ಯದರ್ಶಿ ಮೋಹನರಾಜ ಹಾಗೂ ಇತರ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ನಮ್ಮ ಜನತೆಯ ಆರೋಗ್ಯ ಸುರಕ್ಷತೆಗಾಗಿ ಸದ್ಯದಲ್ಲೇ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.