

ಬಾಗಲಕೋಟೆ: ಇ-ಜನ್ಮ ತಂತ್ರಾಂಶದಲ್ಲಿ ಜನನ-ಮರಣ ಘಟನೆಗಳನ್ನು ಕಡ್ಡಾಯವಾಗಿ ನಿಗದಿತ ಅವಧಿಯೊಳಗೆ ನೋಂದಣಿ ಮಾಡುವಂತೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ನೋಂದಣಿ ಮತ್ತು ಉಪ ನೋಂದಣಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನನ-ಮರಣ ನೋಂದಣಿ, ೧೧ನೇ ಕೃಷಿ ಗಣತಿ, ಬೆಳೆ ಅಂದಾಜು ಸಮೀಕ್ಷೆ ಮತ್ತು ಬೆಳೆ ಅಂಕಿ ಅಂಶಗಳ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನನ-ಮರಣ ವಹಿಗಳು ಶಾಶ್ವತ ದಾಖಲೆಗಳಾಗಿದ್ದು, ಅವುಗಳನ್ನು ಶಾಶ್ವತವಾಗಿ ಕಾಯ್ದಿರಿಸಲು ೨೦೧೫ ಕ್ಕಿಂತ ಪೂರ್ವದಲ್ಲಿ ದಾಖಲಾದ ಜನನ-ಮರಣ ನೋಂದಣಿ ಘಟನೆಗಳನ್ನು ಸ್ಕ್ಯಾನಿಂಗ್ ಮತ್ತು ಡಿಜಿಟೈಜೇಶನ್ ಹಾಗೂ ಪೋರ್ಟಿಂಗ್ ಮಾಡಲು ಸೂಕ್ತ ಸ್ಥಳಾವಕಾಶ ನೀಡಲು ಜಿಲ್ಲೆಯ ಎಲ್ಲ ತಹಸೀಲ್ದಾರ ಹಾಗೂ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ತಿಳಿಸಿದರು.
೧೧ನೇ ಕೃಷಿ ಗಣತಿ ಕಾರ್ಯ ಕ್ಷೇತ್ರವು ಕೃಷಿ ಅಂಕಿ-ಅಂಶಗಳನ್ನು ಸಂಗ್ರಹಿಸುವ ಬೃಹತ್ ಕಾರ್ಯಾಚರಣೆಯ ಒಂದು ಅಂಗವಾಗಿದೆ. ಈ ಕಾರ್ಯಾಚರಣೆಯು ಅಭಿವೃದ್ಧಿ ಯೋಜನೆ, ಸಾಮಾಜಿಕ ಆರ್ಥಿಕ ನೀತಿ ರಚನೆ ಮತ್ತು ರಾಷ್ಟ್ರೀಯ ಆದ್ಯತೆಗಳ ಪ್ರತಿಷ್ಠಾನಕ್ಕಾಗಿ ಕೃಷಿ ಗಣತಿ ದತ್ತಾಂಶವನ್ನು ಬಳಸಲಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರಥಮ ಹಂತದ ಗಣತಿ ಕಾರ್ಯವನ್ನು ಡಿಸೆಂಬರ ಅಂತ್ಯದವರೆಗೆ ಪೂರ್ಣಗೊಳಿಸುವ ಜವಾಬ್ದಾರಿ ಹಾಗೂ ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡಲು ತಹಸೀಲ್ದಾರರಿಗೆ ಸೂಚಿಸಿದರು.
ಬೆಳೆ ಅಂದಾಜು ಸಮೀಕ್ಷೆ ನಮೂನೆ-೧ ಹಾಗೂ ನಮೂನೆ-೨ ಬಾಕಿ ಇರುವ ಬೆಳೆ ಕಟಾವು ಪ್ರಯೋಗಗಳನ್ನು ಅಕ್ಟೋಬರ ಅಂತ್ಯದೊಳಗೆ ಪೂರ್ಣಗೊಳಿಸುವುದು ಮತ್ತು ಯಾವುದೇ ಬೆಳೆ ಕಟಾವು ಪ್ರಯೋಗಗಳು ವ್ಯಪಗತವಾಗದಂತೆ ಮೇಲ್ವಿಚಾರಣೆ ಮಾಡಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಿ.ಪಿ.ಸುಂಕದ, ಜಿಲ್ಲಾ ಅಂಕಿ ಸಂಖ್ಯಾ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಮುಕ್ತೇದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.