

ಬಾಗಲಕೋಟೆ: ಸೀಮಿಕೇರಿ ಗ್ರಾಮದಲ್ಲಿರುವ ಲಡ್ಡುಮುತ್ಯಾ ದೇವಸ್ಥಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ನೇತೃತ್ವದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸಾಕಷ್ಟು ಅಹವಾಲುಗಳು ಹರಿದು ಬಂದವು. ಜನರು ಸದರಿ ಸಾಲಿನಲ್ಲಿ ಬಂದು ತಮ್ಮ ಅಹವಾಲುಗಳನ್ನು ಸಲ್ಲಿಸಿದರು.
ಯಡಹಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷೆ ಮಾಲಾ ನಾಲತ್ವಾಡ ಅವರು ಗದ್ದನಕೇರಿ ಕ್ರಾಸ್‍ನಲ್ಲಿ ದಿನನಿತ್ಯ ಸಂಚಾರದ ಸಮಸ್ಯೆ ಉಂಟಾಗುತ್ತಿದೆ. ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಮಾರುತ್ತಿರುತ್ತಿದ್ದಾರೆ. ಅವರಿಗೆ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆಯ ಜೊತೆಗೆ ಸಂಚಾರಕ್ಕೆ ತೊಂದರೆಯಾಗದಂತೆ ಮಾರ್ಗಸೂಚಿ ದೀಪ (ಸಿಗ್ನಲ್) ಅಳವಡಿಸಬೇಕು. ಕ್ರಾಸ್‍ಬಳಿ ಪ್ರತ್ಯೇಕ ಬಸ್ ನಿಲ್ದಾಣ ಸ್ಥಾಪನೆ ಮಾಡುವಂತೆ ಸಚಿವರಿಗೆ ಮನವಿ ಸಲ್ಲಿಸಿದರು. ಈ ಕುರಿತು ಸಚಿವರು ಕೂಲಂಕುಶವಾಗಿ ಚರ್ಚಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಕಾತರಗಿ ಗ್ರಾಮದ ಕೆಲ ಜಮೀನುಗಳಲ್ಲಿ ಪ್ರವಾಹ ಹಾಗೂ ಹಿನ್ನೀರಿನಿಂದ ಮುಳುಗಡೆ ಹೊಂದುತ್ತಿದ್ದು, ಕೂಡಲೇ ಆ ಜಮೀನು ಅವಾರ್ಡ ಆಗಬೇಕು. ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ರೈತರ ಜಮೀನುಗಳನ್ನು ಕೆಐಎಡಿಬಿಗೆ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ನಿಲ್ಲಿಸಬೇಕು. ಅನಗವಾಡಿಯ ಪುನರ್ವಸತಿ ಕೇಂದ್ರದಲ್ಲಿರುವ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಮಿತಿಯವರು ಕೂಡಲೇ ತಮಗೊಂದು ಭವನ ನಿರ್ಮಾಣ ಕುರಿತ ಮನವಿಗಳು ಸಲ್ಲಿಕೆಯಾದವು.
ಜೀವನಾಂಶ, ಪೋಡಿ, ಗೃಹಲಕ್ಷ್ಮೀ, ಮಾಸಾಶನ, ಯುಜಿಡಿ ಹಾಗೂ ರಸ್ತೆ ನಿರ್ಮಾಣ, ಸೀಮಿಕೇರಿಯ ರಾಮಾರೂಢ ಮಠಕ್ಕೆ ಹಾಗೂ ಬನ್ನಿದಿನ್ನಿ ಗ್ರಾಮಕ್ಕೆ ಕುಡಿಯುವ ನೀರಿನ ಕೊಳವೆಭಾವಿ ಕೊರೆಯಿಸುವ ವ್ಯವಸ್ಥೆ, ಕೇಸನೂರ ಗ್ರಾಮದ ರಸ್ತೆ ಡಾಂಬರೀಕರಣ, ಗೋವಿಂದಪ್ಪ ಹೊಸಮನಿ ಅವರ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಭಾವಿ ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ಮನವಿಗಳು ಬಂದಿದ್ದು, ಅವೆಲ್ಲವುಗಳನ್ನು ಕಾಲಮಿತಿಯಲ್ಲಿ ಬಗೆಹರಿಸುವ ಕಾರ್ಯ ಮಾಡಲಾಗುವುದೆಂದು ತಿಳಿಸಲಾಯಿತು. ಒಟ್ಟು 132 ಅಹವಾಲುಗಳು ಸ್ವೀಕೃತಗೊಂಡಿದ್ದವು.