ಜನತಾ ಕರ್ಫ್ಯೂ ಜಬರದಸ್ತ್

22-hvr-01
Published on

ಹಾವೇರಿ: ಮಾರಕ ಕರೊನಾ ತಡೆಗಟ್ಟಲು ಪ್ರಧಾನಿ ಮೋದಿ ಅವರು ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಭಾನುವಾರ ಜಿಲ್ಲಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.

ಇಡೀ ದಿನ ಮನೆಯಲ್ಲೇ ಕಾಲ ಕಳೆದು ಕರ್ಫ್ಯೂಗೆ ಬೆಂಬಲ ನೀಡಿದ ಜನರು ಸಂಜೆ 5ಗಂಟೆಗೆ ಮನೆಯಿಂದ ಹೊರ ಬಂದು ದೇಶದ ಆರೋಗ್ಯಕ್ಕಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ಪೊಲೀಸರು, ಪೌರ ಕಾರ್ವಿುಕರು, ಪತ್ರಕರ್ತರು ಮತ್ತಿತರರ ಕಾರ್ಯ ಮೆಚ್ಚಿ ಚಪ್ಪಾಳೆ, ಗಂಟೆ, ಜಾಗಟೆ ಬಾರಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.

ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೆ ರಸ್ತೆಯಲ್ಲಿ ವಾಹನ, ಜನಸಂಚಾರ ಸಂಪೂರ್ಣ ಸ್ಥಬ್ಧವಾಗಿತ್ತು. ಹೋಟೆಲ್, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಸ್, ರೈಲು, ಟ್ಯಾಕ್ಸಿ, ಆಟೋ ಸಂಚಾರ ವಿರಳವಾಗಿತ್ತು. ಶನಿವಾರ ರಾತ್ರಿ ಬೆಂಗಳೂರ ಸೇರಿ ದೂರದ ಊರುಗಳಿಂದ ಭಾನುವಾರ ಬೆಳಗ್ಗೆ ಹಾವೇರಿಗೆ ಆಗಮಿಸಿದ್ದ ಕೆಲ ಪ್ರಯಾಣಿಕರಿಗೆ ಮುಂದೆ ತಮ್ಮೂರಿಗೆ ತೆರಳಲು ವಾಹನಗಳ ಸೌಕರ್ಯವಿಲ್ಲದ್ದರಿಂದ ಬಸ್ ನಿಲ್ದಾಣದಲ್ಲಿಯೇ ಕೆಲಹೊತ್ತು ಕಾದು ಬಳಿಕ ದುಪ್ಪಟ್ಟು ಹಣ ಕೊಟ್ಟು ಆಟೋದಲ್ಲಿ ತೆರಳಿದರು. ಕೆಲವರು ಮನೆಯಿಂದ ವಾಹನಗಳನ್ನು ತರಿಸಿ ಊರು ಸೇರಿಕೊಂಡರು.

ನಗರದಲ್ಲಿ ಕೆಲ ಪೆಟ್ರೋಲ್ ಬಂಕ್​ಗಳು ತೆರೆದಿದ್ದವು. ಆದರೆ, ಬಂಕ್​ಗಳಲ್ಲಿ ವಾಹನಗಳ ಸಂಖ್ಯೆ ವಿರಳವಾಗಿತ್ತು. ಖಾಸಗಿ ಆಸ್ಪತ್ರೆಯ ಒಪಿಡಿ ಸೇವೆ ಸ್ಥಗಿತಗೊಂಡಿತ್ತು. ಪೊಲೀಸ್, ಮೆಡಿಕಲ್ ಶಾಪ್, ಹಾಲಿನ ಕೇಂದ್ರಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಹಾಲು ಅಗತ್ಯ ಸೇವೆಗಳ ಪಟ್ಟಿಯಲ್ಲಿದ್ದರೂ ಸುಭಾಸ ವೃತ್ತದಲ್ಲಿ ಪೊಲೀಸರು ಹಾಲಿನ ಕೇಂದ್ರವನ್ನು ಬಲವಂತವಾಗಿ ಮುಚ್ಚಿಸಿದ್ದು ಕಂಡುಬಂತು. ಬೀದಿಬದಿಯ ತಳ್ಳುಗಾಡಿಗಳೂ ತೆರೆದಿರಲಿಲ್ಲ. ಜಿಲ್ಲಾಸ್ಪತ್ರೆಗೆ ಬೆರಳೆಣಿಕೆಯಷ್ಟು ಜನ ಆಗಮಿಸಿದ್ದರು. ವೈದ್ಯರು, ಸಿಬ್ಬಂದಿ ಆರೋಗ್ಯ ಸೇವೆ ನೀಡಿದರು.

ರಾಷ್ಟ್ರೀಯ ಹೆದ್ದಾರಿಯೂ ಭಣಭಣ: ನಗರವಷ್ಟೇ ಅಲ್ಲದೆ, ರಾಷ್ಟ್ರೀಯ ಹೆದ್ದಾರಿಯಲ್ಲೂ ವಾಹನ ಸಂಚಾರ ಗಣನೀಯವಾಗಿ ಕಡಿಮೆಯಿತ್ತು. ಜಿಲ್ಲೆಯ ಎಲ್ಲ ಡಿಪೋಗಳಿಂದಲೂ ಬಸ್ ಹೊರಕ್ಕೆ ಬರಲಿಲ್ಲ. ಜನತಾ ಕರ್ಫ್ಯೂ ಹೇಗಿದೆ ಎಂಬ ಕುತೂಹಲಕ್ಕಾಗಿ ಕೆಲವರು ಬೈಕ್​ಗಳಲ್ಲಿ ಸಂಚರಿಸಿದ್ದನ್ನು ಬಿಟ್ಟರೆ ಜನ ಸಂಚಾರವೇ ಇರಲಿಲ್ಲ.

ಇಂಥಾ ಬಂದ್ ನೋಡೇ ಇಲ್ಲ:
ಅಬ್ಬಬ್ಬಾ ಇಂತಹ ಬಂದ್ ನಾವೆಂದೂ ನೋಡಿರಲೇ ಇಲ್ಲ ಬಿಡ್ರಿ, ಒಂದೇ ಒಂದು ಅಂಗಡಿ ತೆರೆದಿಲ್ಲ. ನೀರು ಬೇಕು ಅಂದ್ರೂ ಸಿಗವಲ್ದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದುದು ಕಂಡು ಬಂತು.

ಸ್ವಚ್ಛತಾ ಕಾರ್ಯ: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಬಸ್, ರೈಲ್ವೆ ನಿಲ್ದಾಣಗಳಲ್ಲಿ ಜನ ದಟ್ಟಣೆ ಇಲ್ಲದಿರುವುದರಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು. ಇದಲ್ಲದೆ ನಗರದ ವಿವಿಧೆಡೆಯಲ್ಲಿಯೂ ಪೌರಕಾರ್ವಿುಕರು ಸ್ವಚ್ಛತೆಯ ಕಾರ್ಯದಲ್ಲಿ ನಿರತರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net