ಜಗದೀಶ ಶೆಟ್ಟರ ಸಿಎ ಕೆಲಸ ಬಿಟ್ಟಿದ್ಯಾಕೆ ಗೊತ್ತಾ…

web
Published on

ವಿಜಯವಾಣಿ ಸುದ್ದಿಜಾಲ ಹಾವೇರಿ
ಬಿಕಾಂ, ಎಲ್‌ಎಲ್‌ಬಿ ಓದಿದ್ದ ನಾನು ಆರಂಭದ ದಿನಗಳಲ್ಲಿ ಸಿಎ ಆಗಬೇಕು ಎಂದುಕೊಂಡು ಹಿರಿಯರೊಬ್ಬರ ಬಳಿ ತರಬೇತಿಗೂ ಸೇರಿದ್ದೇ. ಮೂರ‌್ನಾಲ್ಕು ತಿಂಗಳು ಅವರ ಬಳಿ ಕೆಲಸ ಮಾಡಿದಾಗ ಈ ಕೆಲಸ ಬರೀ ಲೆಕ್ಕ ಮಾಡೋದು ಎಂದು ಅದನ್ನು ಕೈಬಿಟ್ಟೆ.
ಹೀಗೆಂದು ತಮ್ಮ ಯೌವನದ ದಿನಗಳನ್ನು ಮಾಜಿ ಸಿಎಂ ಜಗದೀಶ ಶೆಟ್ಟರ ಸ್ಮರಿಸಿಕೊಂಡರು.
ನಗರದ ಶ್ರೀಗುರು ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘ, ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ತೆರಿಗೆ ಸಲಹೆಗಾರರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಜಿಎಸ್‌ಟಿ ತಂದ ನಂತರ ತೆರಿಗೆ ಸಂಗ್ರಹದಲ್ಲಿ ದಾಖಲೆ ಮಟ್ಟದಲ್ಲಿ ಹೆಚ್ಚಳವಾಗಿದೆ. ಜಿಎಸ್‌ಟಿ ಆರಂಭದಲ್ಲಿ ಎದುರಾದ ಸಮಸ್ಯೆಗಳನ್ನು ನಿವಾರಿಸುವಲ್ಲಿ ತೆರಿಗೆದಾತರು ಹಾಗೂ ಸರ್ಕಾರದ ಮಧ್ಯೆ ಸೇತುವೆಯಂತೆ ತೆರಿಗೆ ಸಲಹೆಗಾರರು ಕೆಲಸ ಮಾಡಿದ್ದೀರಿ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.
ಜಿಎಸ್‌ಟಿ ಜಾರಿಯಾದಾಗಿನಿಂದ ದೇಶಕ್ಕೆ ಒಂದೇ ತೆರಿಗೆ ಬಂದಿದೆ. ಇದು ಯಶಸ್ವಿಯೂ ಆಗಿದೆ. ಆರಂಭದಲ್ಲಿ ಉಂಟಾಗಿದ್ದ ಸಮಸ್ಯೆಗಳು, ಸಂದೇಹಗಳನ್ನು ತೆರಿಗೆದಾತರಿಗೆ ತಿಳಿಸಿ ಹೇಳಿ ಹಂತಹಂತವಾಗಿ ಜಿಎಸ್‌ಟಿ ಜಾರಿ ಯಶಸ್ವಿಯಾಗಲು ತೆರಿಗೆ ಸಲಹೆಗಾರರ ಪಾತ್ರ ಪ್ರಮುಖವಾಗಿದೆ. ಇದನ್ನು ಸರ್ಕಾರ ಎಂದಿಗೂ ಮರೆಯುವುದಿಲ್ಲ. ಯಾವುದೇ ಹೊಸ ಕಾಯ್ದೆ ಬಂದಾಗ ಅದರ ಬಗ್ಗೆ ಸಾರ್ವಜನಿಕರಲ್ಲಿ ಅನೇಕ ಸಂದೇಹಗಳು ಕಾಡುವುದು ಸಹಜ. ಅವುಗಳನ್ನು ಸರ್ಕಾರದ ಜೊತೆಗೆ ತೆರಿಗೆ ಸಲಹೆಗಾರರು ಸಹಕಾರ ನೀಡಿ ಜನರಿಗೆ ಮಾಹಿತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೀರಿ ಎಂದರು.
ರಾಜ್ಯ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಎಸ್. ನಂಜುಂಡ ಪ್ರಸಾದ ಮಾತನಾಡಿ, ಸರ್ಕಾರ ಹಾಗೂ ತೆರಿಗೆದಾತರ ನಡುವೆ ಕೊಂಡಿಯಂತೆ ಕೆಲಸ ಮಾಡುವ ನಮಗೂ ಸರ್ಕಾರ ಕಲ್ಯಾಣ ನಿಧಿ ಸ್ಥಾಪಿಸಬೇಕು. ತರಬೇತಿ ಕೆಲಸಕ್ಕೆ ನಿವೇಶನ ಒದಗಿಸಬೇಕು. ಸಂಘದ ಸುವರ್ಣ ಮಹೋತ್ಸವ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಸಹಕರಿಸಬೇಕು ಎಂಬ ಬೇಡಿಕೆಗಳ ಮನವಿ ಸಲ್ಲಿಸಿದರು.
ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಸಂಘದ ಕಾನ್ಫರೆನ್ಸ್ ಕಮೀಟಿ ಅಧ್ಯಕ್ಷ ವಿಷ್ಣುತೀರ್ಥ ಜಮಖಂಡಿ, ಕಾರ್ಯದರ್ಶಿ ಮುಕುಂದ ಪೋತ್ನಿಸ್, ಉಪಾಧ್ಯಕ್ಷ ಮುಕುಂದ ಪೋತ್ನೀಸ್, ವಲಯ ಉಪಾಧ್ಯಕ್ಷ ರಾಧೇಶ ಜಂಬಗಿ, ಜಿಲ್ಲಾಧ್ಯಕ್ಷ ಶಿವಪ್ಪ ಗುರಿಕಾರ, ಕಾರ್ಯದರ್ಶಿ ತುಕಾರಾಮ ಜಾಧವ, ಮಾಧ್ಯಮದ ವಿಭಾಗದ ಕೋ ಚೇರಮನ್ ರಮೇಶ ಹಿರಗಪ್ಪನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net