

ಬಾಗಲಕೋಟೆ: ಕರ್ನಾಟಕ ಕ್ಷತ್ರಿಯ ಒಕ್ಕೂಟದಿಂದ ಜ.೨೯ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಕ್ಷತ್ರಿಯ ಸಮಾವೇಶ ಆಯೋಜಿಸಲಾಗಿದೆ ಎಂದು ಕ್ಷತ್ರಿಯ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ನಾರಾಯಣಸಾ ಭಾಂಡಗೆ ಹೇಳಿದರು.
ಕಳೆ 4-5 ವರ್ಷಗಳಿಂದ ಕರ್ನಾಟಕ ಕ್ಷತ್ರಿಯ ಒಕ್ಕೂಟದಡಿ ಎಲ್ಲಾ ಕ್ಷತ್ರಿಯರು ಒಗ್ಗೂಡಿದ್ದು ಇದರ ಫಲವಾಗಿ ಬೆಂಗಳೂರಿನಲ್ಲಿ ಬೃಹತ್ ಕ್ಷತ್ರಿಯ ಸಮಾವೇಶದಲ್ಲಿ ವಿರಾಟ ಶಕ್ತಿ ಪ್ರದರ್ಶನ ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಕ್ಷತ್ರಿಯ ಸಮು ದಾಯದ ಜನರು ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ಷತ್ರಿಯ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಶೀಘ್ರ ಕ್ಷತ್ರಿಯ ಅಭಿವೃದ್ಧಿ ನಿಗಮ ಸ್ಥಾಪಿಸಿ, ೨೫೦೦ ಕೋಟಿ ರೂ.ಅನುದಾನ ಮೀಸಲಿಡಬೇಕು. ಕ್ಷತ್ರಿಯ ಸಂಖ್ಯಾ ಬಲಕ್ಕೆ ಅನುಗುಣವಾಗಿ ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೂ ರಾಜಕೀಯ ಪ್ರಾತಿನಿಧ್ಯ ನೀಡುವುದು. ರಾಜ್ಯದಲ್ಲಿ ಕ್ಷತ್ರಿಯ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಹಾಗೂ ಜಾತಿ ಪಟ್ಟಿನಿಂದ ಹೊರಗಿರುವ ಕ್ಷತ್ರಿಯ ಸಮುದಾಯದ ಉಪಜಾತಿಗಳನ್ನು ಕೂಡಲೇ ಜಾತಿ ಪಟ್ಟಿಗೆ ಸೇರಿಸಬೇಕು. ಕೇಂದ್ರ ಸರ್ಕಾರದ ಹಿಂದುಳಿದ ವರ್ಗ (ಓಬಿಸಿ) ಪಟ್ಟಿಯಿಂದ ಹೊರಗಿರುವ ನಮ್ಮ ಸಮುದಾಯದಗಳನ್ನು ಕೂಡಲೇ ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸಬೇಕು ಎಂದು ಸಮಾವೇಶದಲ್ಲಿ ಹಕ್ಕೋತ್ತಾಯ ಮಂಡಿಸಲಾಗುವುದು ಎಂದು ಹೇಳಿದರು.
ಒಕ್ಕೂಟ ಜಿಲ್ಲಾ ಸಂಚಾಲಕ ಡಾ.ಶೇಖರ ಮಾನೆ ಮಾತನಾಡಿ, ರಾಜ್ಯದಲ್ಲಿ ಪ್ರತಿ ತಾಲೂಕು ಕೇಂದ್ರದಲ್ಲಿ ೧ ಕೋಟಿ ರೂ.ವೆಚ್ಚದಲ್ಲಿ ಕ್ಷತ್ರಿಯ ಸಮುದಾಯ ಭವನ ನಿರ್ಮಾಣ ಮಾಡಬೇಕು. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಕ್ಷತ್ರಿಯ ಸಮುದಾಯ ಶಿಕ್ಷಣ ಸಂಸ್ಥೆ, ವಿದ್ಯಾರ್ಥಿ ನಿಲಯ ಇತರೆ ಸಾಮಾಜಿಕ ಚಟುವಟಿಕೆಗಳಿಗಾಗಿ ಐದು ಎಕರೆ ಭೂಮಿ ಮಂಜೂರು ಮಾಡಬೇಕು. ಬೆಂಗಳೂರಿನಲ್ಲಿ ಕರ್ನಾಟಕ ಕ್ಷತ್ರಿಯ ಭವನ, ಕ್ಷತ್ರಿಯ ಸಮುದಾಯದ ಶಿಕ್ಷಣ ಸಂಸ್ಥೆಗಳು, ವಸತಿ ನಿಲಯಗಳು ಸೇರಿ ಸಾಮಾಜಿಕ ಚಟುವಟಿಕೆಗಳಿಗೆ ೨೫ ಎಕರೆ ಭೂಮಿ ಮಂಜೂರು ಮಾಡಬೇಕು ಎನ್ನುವುದು ನಮ್ಮ ಬೇಡಿಕೆ ಎಂದು ತಿಳಿಸಿದರು.