

ಬಾಗಲಕೋಟೆ: ಅಯೋಧ್ಯೆಯಲ್ಲಿ ಜ.೨೨ ರಂದು ರಾಮಲುಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬಿಜೆಪಿ ನಗರ ಘಟಕದಿಂದ ಜ.೧೯ ರಂದು ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ ೭ಕ್ಕೆ ಶ್ರೀರಾಮ ನಾಮ ತಾರಕ ಹೋಮ ಏರ್ಪಡಿಸಲಾಗಿದೆ ಎಂದು ಬಿಜೆಪಿ ವಕ್ತಾರ ಸತ್ಯನಾರಾಯಣ ಹೇಮಾದ್ರಿ ಹೇಳಿದರು.
ನಗರದ ಪ್ರೆಸ್‌ಕ್ಲ್ಬ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ಪಂ.ಬಿಂದ್ವಾಚಾರ್ಯ ನಾಗಸಂಪಿಗೆ ಅವರ ತಂಡದಿಂದ ೧೦೮ ಹೋಮ ತಾರಕ ಹೋಮ ಏರ್ಪಡಿಸಲಾಗಿದೆ. ಹೋಮದಲ್ಲಿ ಹೆಸರು ನೋಂದಾಯಿಸಿದವರು ಸೇರಿದಂತೆ ಬೆಳಿಗ್ಗೆ ಬಂದವರಿಗೂ ಹೋಮದಲ್ಲಿ ಭಾಗವಹಿಸಲು ಆದ್ಯತೆ ನೀಡಲಾಗುವುದು ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ದಂಪತಿಗಳು ಆಗಮಿಸಿದ್ದಾದರೆ ಅವರೆಲ್ಲರಿಗೂ ಕೂಡ ಹೋಮದ ವ್ಯವಸ್ಥೆ ಮಾಡಲಾಗುತ್ತದೆ. ಹೋಮದ ನಂತರ ಮಧ್ಯಾಹ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಸದಾನಂದ ನಾರಾ ಮಾತನಾಡಿ, ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ದಿನದಂದು ಹಳೇ ಬಾಗಲಕೋಟೆ, ವಿದ್ಯಾಗಿರಿ ಹಾಗೂ ನವನಗರದ ಎಲ್ಲ ದೇವಸ್ಥಾನಗಳಲ್ಲಿ ಬಿಜೆಪಿ ನಗರಸಭೆ ಸದಸ್ಯರುಗಳು ಹಾಗೂ ಮುಖಂಡರಿಂದ ಮಧ್ಯಾಹ್ನ ೧೨ ರಿಂದ ೨ರ ವರೆಗೆ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಶೋಕ ಲಿಂಬಾವಳಿ ಮಾತನಾಡಿ, ಜ.೨೨ ರಂದು ಸಂಜೆ ಪ್ರತಿಯೊಬ್ಬರ ಮನೆಗಳನ್ನು ದೀಪದಿಂದ ಅಲಂಕಾರ ಮಾಡುವ ಮೂಲಕ ದೀಪಾವಳಿ ರೀತಿಯಲ್ಲಿ ರಾಮಲುಲ್ಲಾ ಪ್ರಾಣ ಪ್ರತಿಷ್ಠಾಪನೆಯನ್ನು ಸಂಭ್ರಮಿಸೋಣ. ತಾಲೂಕಿನ ಸೀತಿಮನಿ ಗ್ರಾಮದ ಸೀತಾರಾಮ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿವಿಧ ಪೂಜಾ ಕೈಕಂರ್ಯಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.