

ಬಾಗಲಕೋಟೆ: ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ ೨೦೨೧ ಮತ್ತು ೨೦೨೨ನೇ ಸಾಲಿನ ಸಂಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ.೧೮ ರಂದು ಇಳಕಲ್ಲಿನ ವಿಜಯ ಮಹಾಂತೇಶ ಶಿವಯೋಗಿಗಳ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಂಯಮ ಮಂಡಳಿಯ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ ಹೇಳಿದರು.
ಕೋವಿಡ್ ಹಿನ್ನೆಲೆಯಲ್ಲಿ ೨೦೨೧ ಮತ್ತು ೨೦೨೨ನೇ ಸಾಲಿನ ಸಂಯಮ ಪ್ರಶಸ್ತಿಯನ್ನು ನೀಡಲು ಸಾಧ್ಯವಾಗಲಿಲ್ಲ. ಈ ವರ್ಷ ಎರಡು ಸಾಲಿನ ಪ್ರಶಸ್ತಿಯನ್ನು ಒಂದೇ ಸಾರಿ ನೀಡಲಾಗುತ್ತಿದೆ. ೨೦೨೧ನೇ ಸಾಲಿನ ಪ್ರಶಸ್ತಿಗೆ ಬೀದರ ಜಿಲ್ಲೆಯ ಭಾಲ್ಕಿಯ ಹಿರೇಮಠದ ಗುರುಬಸವ ಪಟ್ಟದೇವರ ಮತ್ತು ೨೦೨೨ನೇ ಸಾಲಿನ ಪ್ರಶಸ್ತಿಗೆ ಮೈಸೂರಿನ ಬಸವ ಮಾರ್ಗದ ಮುಖ್ಯಸ್ಥ ಬಸವರಾಜು ಅವರು ಆಯ್ಕೆಯಾಗಿದ್ದು, ಪಶಸ್ತಿ ತಲಾ ೧ ಲಕ್ಷ ರೂ. ನಗದು ಒಳಗೊಂಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗದಗ ಜಿಲ್ಲೆ ಡಂಬಳದ ತೋಂಟದಾರ್ಯ ಸಂಸ್ಥಾನ ಮಠದ ಸಿದ್ದರಾಮ ಸ್ವಾಮೀಜಿ, ಬಾಗಲಕೋಟೆ ನಿಡಸೋಶಿಯ ಸಿದ್ದ ಸಂಸ್ಥಾನ ಮಠದ ಶಿವಲಿಂಗೇಶ್ವರ ಸ್ವಾಮಿಜಿ, ಬೀದರ ಜಿಲ್ಲೆ ಭಾಲ್ಕಿಯ ಬಸವಲಿಂಗ ಪಟ್ಟದೇವರು ಮತ್ತು ಇಳಕಲ್ಲದ ಗುರು ಮಹಾಂತ ಶ್ರೀಗಳ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಶಾಸಕ ದೊಡ್ಡನಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಎಸ್.ಶಂಕರಪ್ಪ ಮಾತನಾಡಿ ೧೯೮೪ರಲ್ಲಿ ಆರಂಭಗೊಂಡ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು ಮದ್ಯಪಾನ ಮತ್ತು ಮಾದಕವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಈ ದುಶ್ಚಟಗಳನ್ನು ರಾಜ್ಯದಿಂದ ನಿರ್ಮೂಲನ ಮಾಡುವ ಧೈಯೋದ್ದೇಶದೊಂದಿಗೆ ಶಾಲಾ ಕಾಲೇಜುಗಳಲ್ಲಿ ವಿಚಾರ ಸಂಕಿರಣ, ಬೀದಿ ನಾಟಕ, ಹೆದ್ದಾರಿ ಫಲಕ ಒಳವಡಿಸಲಾಗುತ್ತಿದೆ. ಸಂಯಮ ಪ್ರಶಸ್ತಿಯನ್ನು ೨೦೧೦-೧೧ನೇ ಸಾಲಿನಿಂದ ನೀಡುತ್ತಾ ಬಂದಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಜಿ.ಎಸ್.ಗೌಡರ ಉಪಸ್ಥಿತರಿದ್ದರು.