

ಬಾಗಲಕೋಟೆ: ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಹೆಚ್ಚುವರಿ ನ್ಯಾಯಾಲಯ ಕಟ್ಟಡದ ಶಂಕು ಸ್ಥಾಪನೆ ಸಮಾರಂಭ ಜ.೧೮ ರಂದು ನವನಗರದ ನ್ಯಾಯಾಲಯ ಆವರಣದಲ್ಲಿ ಬೆಳಗ್ಗೆ ೧೦:೩೦ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ರಮೇಶ ಬದ್ನೂರ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯಮೂರ್ತಿ ಎಚ್. ಪಿ.ಸಂದೇಶ ಶಂಕುಸ್ಥಾಪನೆ ಮಾಡಲಿದ್ದಾರೆ. ಇನ್ನೋರ್ವ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ರವಿ ಹೊಸಮನಿ ಹಾಗೂ ಸಂಜೀವಕುಮಾರ ಹಂಚಾಟೆ ಭಾಗವಹಿಸಲಿದ್ದಾರೆ. ಕಾನೂನು ಸಚಿವ ಎಚ್.ಕೆ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಸಂಸದ ಪಿ.ಸಿ.ಗದ್ದಿಗೌಡರ, ವಿ.ಪ ಸದಸ್ಯ ಪಿ.ಎಚ್.ಪೂಜಾರ, ಎಚ್.ಆರ್.ನಿರಾಣಿ ಸೇರಿದಂತೆ ಪಾಲ್ಗೊಳ್ಳಲಿದ್ದಾರೆ ಎಂದರು.
ಐದು ಮಹಡಿಗಳ ಕಟ್ಟಡ ಇದಾಗಿದೆ, ನೆಲಮಹಡಿ ೧೪೫೮೦.೦೦ ಚದುರ ಅಡಿಯಲ್ಲಿ ಶಿಶು ವಿಹಾರ, ಆಸ್ಪತ್ರೆ, ಔಷಧಾಲಯ, ವಿದ್ಯುತ್ ಕೊಠಡಿ ಹಾಗೂ ದ್ವಿಚಕ್ರ ವಾಹನ ಹಾಗೂ ಕಾರ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಮೊದಲನೇಯ ಮಹಡಿ, ಎರಡನೇ ಮಹಡಿ, ಮೂರನೇ ಮಹಡಿ, ಕೊನೆಯ ಮಹಡಿ ಸೇರಿದಂತೆ ವಿವಿಧ ರೀತಿಯಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಒಟ್ಟು ೧೭.೬೦ ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ನಮ್ಮ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಬಳಿಕ ಸರ್ಕಾರ ಹಾಗೂ ಜನಪ್ರತಿನಿಽಗಳಿಗೆ ಮನವಿ ಮಾಡಿದ್ದೇವು. ತರುವಾಯ ಎರಡು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳನ್ನು, ಒಂದು ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸ್ಥಾಪನೆಗೆ ಆದೇಶ ಹೊರಡಿಸಿದ್ದಾರೆ. ನೆನೆಗುದಿಗೆ ಬಿದ್ದಿರುವ ವಕೀಲರ ಭವನಕ್ಕೆ ಲಿ-ï್ಟ ಅಳಡಿಸುವ ಕಾಮಗಾರಿಗೂ ೩೩ ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಶುದ್ಧ ಕುಡಿಯುವ ನೀರಿನ ಘಟಕ, ಗ್ರಂಥಾಲಯ ಸ್ಥಾಪನೆಗೆ ಶಾಸಕರು, ವಿ.ಪ ಸದಸ್ಯರು ಅನುದಾನ ಒದಗಿಸಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿಗಳ ಸಂಘದ ಪ್ರಶಾಂತ ನಾರಾಯಣಕರ, ಜೆ.ಜೆ.ಕುಲಕರ್ಣಿ, ಪಿ.ಎಸ್.ಹಕ್ಕಾಪಕ್ಕಿ ಇದ್ದರು.