

ಬಾಗಲಕೋಟೆ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಜನೆವರಿ ೧೫ ರ ಒಳಗಾಗಿ ಬಿಡುಗಡೆ ಮಾಡಲಾಗುವುದು ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಹುನಗುಂದ ತಾಲೂಕಿನ ಬೆಳಗಲ್ಲ ಗ್ರಾಮಕ್ಕೆ ಬುಧವಾರ ಎಸ್‌ಆರ್‌ಕೆ ಸಕ್ಕರೆ ಕಾರ್ಖಾನೆ ಭೂಮಿ ಪೂಜೆಗೆ ಆಗಮಿಸಿದ್ದ ವೇಳೆ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.
ನಾನು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎನ್ನುವ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇನೆ. ಬಾದಾಮಿಯಿಂದ ಸ್ಪರ್ಧೆ ಮಾಡುವಂತೆ ಜನರು ಹೇಳುತ್ತಿದ್ದಾರೆ. ಹೀಗಾಗಿ ಹೈಕಮಾಂಡ್ ಬಾದಾಮಿ, ಕೋಲಾರ, ವರುಣಾ ಯಾವ ಕ್ಷೇತ್ರವನ್ನು ಹೇಳುತ್ತಾರೋ ಅಲ್ಲಿಂದ ಸ್ಪರ್ಧೆ ಮಾಡುವೆ ಎಂದು ತಿಳಿಸಿದರು.
ನೆಲ, ಜಲ, ಭಾಷೆಯಲ್ಲಿ ಮೋದಿ, ಶಾ ಹೇಳಿದರೂ ರಾಜೀ ಇಲ್ಲ :
ಗಡಿ ವಿಚಾರವಾಗಿ ಅಮಿತ್ ಶಾ ಅವರು ಮುಖ್ಯಮಂತ್ರಿಗಳ ಸಭೆ ಕರೆದಿರುವ ಬಗ್ಗೆ ಮಾತನಾಡಿದ ಅವರು, ಇದೊಂದು ವಿಷಯವೇ ಅಲ್ಲ. ಕರ್ನಾಟಕ, ಮಹಾರಾಷ್ಟ್ರ, ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳೇ ಇವೆ. ಮಹಾರಾಷ್ಟ್ರದವರು ರಾಜಕೀಯ ಕಾರಣಕ್ಕೆ ಯಾವಾಗಲೂ ಗಡಿ ಕ್ಯಾತೆ ತೆಗೆಯುತ್ತ ಬಂದಿದ್ದಾರೆ. ೧೯೬೨ರಲ್ಲೆ ಮಹಾಜನ ವರದಿ ಪ್ರಕಾರ ಬೆಳಗಾವಿ ನಮ್ಮದು. ಒಂದು ಇಂಚು ಜಾಗ ಸಹ ಬಿಟ್ಟು ಕೊಡಲು ಆಗಲ್ಲ. ನೆಲ, ಜಲ, ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ನರೇಂದ್ರ ಮೋದಿ, ಅಮಿತ್ ಶಾ ಇರಲಿ, ಯಾರೇ ಹೇಳಿದರೂ ರಾಜಿ ಇಲ್ಲ. ಮಹಾಜನ್ ವರದಿ ಪ್ರಕಾರ ಎಲ್ಲವೂ ಇತ್ಯರ್ಥವಾಗಿದೆ. ರಾಜಕೀಯಕ್ಕಾಗಿ ಇದನ್ನು ಜೀವಂತ ಇಟ್ಟಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ವೀಕ್ ಆಗಬಾರದು. ಅವರು ಪುಂಡಾಟಿಕೆ ಮಾಡಿದರೆ ಅವರನ್ನು ಬಲಿ ಹಾಕಬೇಕು. ಆದರೆ, ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ. ಯಾರು ಎಲ್ಲಿ ಬೇಕಾದರೂ ತಿರುಗಾಡಬಹುದು, ಅದರಿಂದ ಸಮಸ್ಯೆ ಆಗಬಾರದು. ಬಸವರಾಜ್ ಬೊಮ್ಮಾಯಿ ವೀಕ್ ಲೀಡರ್ ಇದ್ದು, ಅದು ಸಮಸ್ಯೆಯಾಗಿದೆ ಎಂದು ಮಾಜಿ ಸಿಎಂ ಹೇಳಿದರು.