ಛೇ! ಏನ್ ಝುಳಾ..ಉರಿರೀ...!

24-RNR-01A
Published on

ರಾಣೆಬೆನ್ನೂರ: ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ಪ್ರಖರತೆಗೆ ಜಿಲ್ಲೆಯ ಜನರು ಬಸವಳಿದಿದ್ದಾರೆ. ದಿನಬೆಳಗಾದರೆ ವಿವಿಧ ಕೆಲಸಗಳಿಗಾಗಿ ನಗರ ಪ್ರದೇಶಗಳಿಗೆ ಬರುವವರು ಜಳ ತಡೆಯಲಾರದೆ ತಂಪು ಪಾನೀಯಕ್ಕೆ ಮೊರೆ ಹೋಗುತ್ತಿದ್ದಾರೆ.

ತಾಲೂಕಿನಲ್ಲಿ ಒಂದು ವಾರದಿಂದ ನಿತ್ಯವೂ ಉಷ್ಣಾಂಶ 37.06 ಡಿಗ್ರಿ ಸೆಲ್ಸಿಯಸ್​ನಿಂದ 38.5 ಡಿಗ್ರಿ ಸೆಲ್ಸಿಯಸ್​ವರೆಗೆ ದಾಖಲಾ ಗುತ್ತಿದ್ದರೆ, ಜಿಲ್ಲೆಯಲ್ಲಿ 37.08 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾ ಗುತ್ತಿದೆ. ಗಾಳಿಯಲ್ಲಿ ತೇವಾಂಶ ಸಂಪೂರ್ಣ ಕಡಿಮೆ ಆಗಿರುವುದರಿಂದ ಉಷ್ಣಾಂಶ ಹೆಚ್ಚಳವಾಗುತ್ತಿದೆ.

ದರ ಹೆಚ್ಚಳ: ಬಿಸಿಲಿನ ಪ್ರರಖತೆ ಏರಿಕೆಯಾಗುತ್ತಿದ್ದಂತೆ ಜನತೆ ಹೆಚ್ಚಾಗಿ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಅನಿವಾರ್ಯ ಎಂಬಂತೆ ಪಾನೀಯಗಳ ದರ ಕೂಡ ಏರಿಕೆಯಾಗಿವೆ. ರಸ್ತೆಗಳ ಅಕ್ಕಪಕ್ಕದ ಫುಟ್​ಪಾತ್​ಗಳಲ್ಲಿ ಕಲ್ಲಂಗಡಿ, ಕರಬೂಜ್ ಹಣ್ಣುಗಳನ್ನು ಗುಡ್ಡೆ ಹಾಕಿ ಮಾರಾಟ ಮಾಡಲಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ ಎಳನೀರನ್ನು 25 ರೂ.ಗೆ ಒಂದರಂತೆ ಮಾರಾಟ ಮಾಡಿದರೆ, ಈಗ 30 ರೂಪಾಯಿಯಿಂದ 35 ರೂಪಾಯಿ ವರೆಗೂ ಮಾರಾಟ ಮಾಡಲಾಗುತ್ತಿದೆ. ಕಲ್ಲಂಗಡಿ ಹಣ್ಣನ್ನು ಪ್ಲೇಟ್​ಗೆ 15 ರೂಪಾಯಿಯಿಂದ 20 ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದಾರೆ.

ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚುತ್ತಿದೆ ಬಿಸಿಲು...

ಕಳೆದೊಂದು ವಾರದಿಂದ ಜಿಲ್ಲೆಯ ವಾತಾವರಣದಲ್ಲಿ ಉಷ್ಣಾಂಶ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಶಿವರಾತ್ರಿಗೂ ಮುನ್ನ ಜಿಲ್ಲೆಯಲ್ಲಿ 34 ಡಿಗ್ರಿ ಸೆಲ್ಸಿಯಸ್​ನಿಂದ 35 ಡಿಗ್ರಿವರೆಗೂ ಬಿಸಿಲು ದಾಖಲಾಗುತ್ತಿತ್ತು. ಆದರೀಗ 37.08 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗುತ್ತಿದೆ. ತಿಂಗಳ ಕೊನೆ ಹಾಗೂ ಮುಂದಿನ ತಿಂಗಳ ಮೊದಲ ವಾರದಲ್ಲಿ 38 ಡಿಗ್ರಿ ಸೆಲ್ಸಿಯಸ್​ನಿಂದ 40 ಡಿಗ್ರಿ ಸೆಲ್ಸಿಯಸ್​ನವರೆಗೂ ದಾಖಲಾಗಬಹುದು. ಕಳೆದ 2020ರ ಮಾರ್ಚ್ ತಿಂಗಳ ಆರಂಭದಲ್ಲಿ 36.09 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿದ್ದರೆ, ಅದೇ ತಿಂಗಳ ಕೊನೆಯಲ್ಲಿ 38.03 ಡಿಗ್ರಿಯಷ್ಟು ಉಷ್ಣಾಂಶ ಹೆಚ್ಚಳವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಬಿಸಿಲಿನ ಪ್ರಖರತೆ ಹೆಚ್ಚಳವಾಗಲಿದೆ.

ಕಳೆದ ವರ್ಷದ ಬೇಸಿಗೆ ತಿಳಿಯಲೇ ಇಲ್ಲ

ಕಳೆದ ವರ್ಷ ಬಿಸಿಲು ಹೆಚ್ಚಾಗುವ ಮಾರ್ಚ್ ತಿಂಗಳ ಸಮಯಕ್ಕೆ ಕರೊನಾ ಹಿನ್ನೆಲೆಯಲ್ಲಿ ಲಾಕ್​ಡೌನ್ ಘೊಷಿಸಲಾಗಿತ್ತು. ಆದ್ದರಿಂದ ಜನತೆ ಮನೆಯಿಂದ ಹೊರಗೆ ಬಂದಿರಲಿಲ್ಲ. ಹೀಗಾಗಿ ಜನತೆಗೆ ಬಿಸಿಲಿನ ಸ್ಪರ್ಷ ಅಷ್ಟಾಗಿ ತಟ್ಟಿರಲಿಲ್ಲ.

ಬೇಸಿಗೆ ಬಂದರೆ ಮುಖ್ಯವಾಗಿ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಅದರಲ್ಲೂ ಚಿಕ್ಕ ಮಕ್ಕಳು ಈ ಸಮಸ್ಯೆಗೆ ಬಳಲುವುದು ಹೆಚ್ಚು. ಆದ್ದರಿಂದ ಜನತೆ ಸುರಕ್ಷತೆ ದೃಷ್ಟಿಯಿಂದ ಬಿಸಿಲಲ್ಲಿ ಓಡಾಡುವುದನ್ನು ಕಡಿಮೆ ಮಾಡಬೇಕು. ನೀರು, ತಂಪು ಪಾನೀಯಗಳ ಸೇವನೆ ಹೆಚ್ಚಾಗಿ ಮಾಡುವುದು ಸೂಕ್ತ. ಹೊರಗಡೆಯ ಆಹಾರ ಪದಾರ್ಥ ಸೇವನೆ ಕೈಬಿಡಬೇಕು. ಜಿಲ್ಲೆಯ ಅಲ್ಲಲ್ಲಿ ಜಾತ್ರೆಗಳು ಹೆಚ್ಚಾಗಿ ನಡೆಯತ್ತಿದ್ದು, ಆದಷ್ಟು ಶುಚಿತ್ವ ಕಾಪಾಡಿಕೊಳ್ಳಬೇಕು. | ಡಾ. ಕಾಂತೇಶ ಭಜಂತ್ರಿತಾಲೂಕು ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net