

ವಿರಾಜಪೇಟೆ: ಪಟ್ಟಣದ ಲಿಟಲ್ ಸ್ಕಾಲರ್ಸ್ ಅಕಾಡೆಮಿ ವತಿಯಿಂದ ಚೆನ್ನಂಗಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಒಂದು ದಿನದ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಚೆನ್ನಂಗಿ ಶಾಲೆಗೆ ಭೇಟಿ ನೀಡಿದ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ಆ ಶಾಲೆಯ ಮಕ್ಕಳೊಂದಿಗೆ ಶೈಕ್ಷಣಿಕ ಕಾರ್ಯಕ್ರಮ ಹಾಗೂ ಪಠ್ಯಕ್ಕೆ ಸಂಬಂಧಿಸಿದಂತೆ ಪರಸ್ಪರ ವಿಚಾರ ವಿನಿಮಯ ನಡೆಸಿದರು. ನಂತರ ಎರಡು ಶಾಲೆಯ ಮಕ್ಕಳು ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮೀಪದ ಹಾಡಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಗೆ ಶಿಕ್ಷಣದ ಮಹತ್ವ, ಬಾಲ್ಯ ವಿವಾಹದ ಪರಿಣಾಮ ಮತ್ತು ದುಶ್ಚಟಗಳ ಪರಿಣಾಮದ ಬಗ್ಗೆ ಕಿರು ನಾಟಕದ ಮೂಲಕ ಅರಿವನ್ನು ಮೂಡಿಸಿದರು.
ನಂತರ ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥೆ ಪೂಜಾ ರವೀಂದ್ರ, ಶಾಲೆಗೆ ಬೇಕಾದ ಅಗತ್ಯ ವಸ್ತುಗಳನ್ನು ಒದಗಿಸಿ ಕೊಡಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಈ ಶಾಲೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಚೆನ್ನಂಗಿ ಶಾಲೆ ವತಿಯಿಂದ ಪೂಜಾ ರವೀಂದ್ರ ಅವರನ್ನು ಸನ್ಮಾನಿಸಲಾಯಿತು.
ಎರಡು ಶಾಲೆಯ ಮಕ್ಕಳು ಸಹ ಭೋಜನದಲ್ಲಿ ಪಾಲ್ಗೊಂಡರು.
ಒಂಟಿಯಂಗಡಿ ಕ್ಲಸ್ಟರ್‌ನ ಸಿಆರ್‌ಪಿ ಸುಶ, ಲಿಟಲ್ ಸ್ಕಾಲರ್ಸ್ ಅಕಾಡೆಮಿ ಕಾರ್ಯದರ್ಶಿ ಪ್ರತಿಮಾ ರಂಜನ್, ಮುಖ್ಯಶಿಕ್ಷಕಿ ಮೀರಾ ಪೂಣಚ್ಚ, ಸಹ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಹಾಡಿ ನಿವಾಸಿಗಳು ಉಪಸ್ಥಿತರಿದ್ದರು.