

ಕುಮಟಾ: ಲಾಕ್ಡೌನ್ ನಿಮಿತ್ತ ಚೆಕ್ಪೋಸ್ಟ್ಗಳಲ್ಲಿ ಆಂಬುಲೆನ್ಸ್ಗಳಿಗೆ ಉಂಟಾಗುತ್ತಿರುವ ಅಡ್ಡಿ-ಕಿರಿಕಿರಿ ತಪ್ಪಿಸಬೇಕು. ಇಲ್ಲವೆ, ಲಾಕ್ಡೌನ್ ಮುಗಿಯುವವರೆಗೆ ಆಂಬ್ಯುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸಲು ಅನುಮತಿ ನೀಡಬೇಕು ಎಂದು ತಾಲೂಕಿನ ಖಾಸಗಿ ಆಂಬ್ಯುಲೆನ್ಸ್ ಚಾಲಕ-ಮಾಲೀಕರು ಭಾನುವಾರ ಶಾಸಕ ದಿನಕರ ಶೆಟ್ಟಿ ಹಾಗೂ ಉಪವಿಭಾಗಾಧಿಕಾರಿ ಅಜಿತ್ ಎಂ. ರೈ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಒಟ್ಟು 12 ಆಂಬುಲೆನ್ಸ್ ಮೂಲಕ ರೋಗಿಗಳನ್ನು ಒಂದೆಡೆಯಿಂದ ಇನ್ನೊಂದೆಡೆ ಸಂಚಾರ ಸೇವೆ ಒದಗಿಸುತ್ತಿದ್ದೇವೆ. ತುರ್ತು ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಘಟ್ಟದ ಮೇಲ್ಭಾಗದ ಹಾಗೂ ಉಡುಪಿ, ಮಂಗಳೂರಿನ ದೊಡ್ಡ ಆಸ್ಪತ್ರೆಗಳಿಗೆ ಸಾಗಬೇಕಾಗಾದ ಹೊಳೆಗದ್ದೆ ನಾಕಾ, ಶಿರೂರು ಚೆಕ್ಪೋಸ್ಟ್ಗಳಲ್ಲಿ ಮುಂದಕ್ಕೆ ಸಂಚಾರ ನಿರಾಕರಿಸಲಾಗುತ್ತದೆ. ನಮ್ಮೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳಲಾಗುತ್ತಿದೆ. ರೋಗಿಗಳ ಸ್ಥಿತಿಗತಿ, ವೈದ್ಯರ ಪ್ರಮಾಣಪತ್ರ ತೋರಿಸಿದರೂ ಅನುಮತಿ ನೀಡುತ್ತಿಲ್ಲ. ಶನಿವಾರ ಶಿರಸಿಯ ಟಿಎಸ್ಎಸ್ ಆಸ್ಪತ್ರೆಗೆ ರೋಗಿ ಸಾಗಿಸುವಾಗ ನಿಲೇಕಣಿ ಚೆಕ್ಪೋಸ್ಟ್ನಲ್ಲಿ ಅನುಮತಿಸದೇ ತೊಂದರೆ ನೀಡಿದ್ದರು. ಚೆಕ್ಪೋಸ್ಟ್ಗಳಲ್ಲಿ ಕಿರುಕುಳ ತಪ್ಪಿಸಿದರೆ ಮಾತ್ರ ನಾವು ಆಂಬುಲೆನ್ಸ್ ಸೇವೆ ಮುಂದುವರಿಸಬಹುದಾಗಿದೆ ಎಂದು ಮನವಿಯಲ್ಲಿ ತಿಳಿಸಿದರು.
ಈ ವೇಳೆ ಉಪಸ್ಥಿತರಿದ್ದ ಉಪವಿಭಾಗಾಧಿಕಾರಿ ಅಜಿತ್ ಎಂ.ರೈ ಆಂಬುಲೆನ್ಸ್ ಚಾಲಕ-ಮಾಲೀಕರಿಗೆ ಎಲ್ಲ ರೀತಿಯ ಸಹಕಾರದ ಭರವಸೆ ನೀಡಿದರು. ಆಂಬುಲೆನ್ಸ್ ಚಾಲಕ - ಮಾಲೀಕರಾದ ಭಾಸ್ಕರ ನಾಯ್ಕ, ಉಲ್ಲಾಸ, ಚಂದ್ರು ನಾಯ್ಕ, ಮಣಿಕಂಠ ನಾಯ್ಕ, ಸಂಜು, ಜಾನು, ಕೃಷ್ಣ ಗೌಡ ಇನ್ನಿತರರು ಇದ್ದರು.
ಸಮಸ್ಯೆ ಬಗೆಹರಿಸಿದ ಶಾಸಕ: ಮನವಿ ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ ಅವರು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿ, ‘ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು, ಉಡುಪಿ ಜಿಲ್ಲೆಗಳಿಗೆ ತೆರಳುವುದು ಅನಿವಾರ್ಯ. ತುರ್ತು ಪರಿಸ್ಥಿತಿಯಲ್ಲಿ ಬರುವ ಪ್ರತಿಯೊಂದು ರೋಗಿಯೂ ಕರೊನಾ ಸೋಂಕು ಇಲ್ಲವೆಂದು ದೃಢೀಕರಣ ತರುವುದು ಅಸಾಧ್ಯ ಎಂದು ಸಮಸ್ಯೆ ಮನದಟ್ಟು ಮಾಡಿದರು. ಒಂದೊಮ್ಮೆ ಆಂಬುಲೆನ್ಸ್ಗಳಿಗೆ ಅನುಮತಿ ನಿರಾಕರಿಸಿದರೆ ಲಾಠಿ ಹಿಡಿದು ಚೆಕ್ಪೋಸ್ಟ್ಗೆ ಬಂದು ನಿಲ್ಲುತ್ತೇನೆ. ಜಿಲ್ಲೆಯ ಯಾವುದೇ ರೋಗಿ ಶಿರೂರು ಚೆಕ್ಪೋಸ್ಟ್ನಲ್ಲಿ ಅನುಮತಿ ನಿರಾಕರಣೆಯಿಂದ ಚಿಕಿತ್ಸೆ ಸಿಗದೇ ಮೃತರಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. ಬಳಿಕ ಜಿಲ್ಲಾಧಿಕಾರಿ ಜಿ.ಜಗದೀಶ ಉತ್ತರ ಕನ್ನಡ ಜಿಲ್ಲೆಯ ಆಂಬುಲೆನ್ಸ್ಗಳಿಗೆ ಅನುಮತಿ ನೀಡಿ, ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡುವ ಭರವಸೆ ನೀಡಿದರು. ಸಮಸ್ಯೆ ಬಗೆಹರಿದಿದೆ ಎಂದು ಶಾಸಕ ಶೆಟ್ಟಿ ಆಂಬುಲೆನ್ಸ್ ಚಾಲಕ-ಮಾಲೀಕರಿಗೆ ತಿಳಿಸಿದರು.