

ಬಾಗಲಕೋಟೆ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೀಸಲಾತಿ ಹೋರಾಟಗಳು ಪರಿಣಾಮ ಬೀರಲಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ ಬಸವಜಯ ಮೃತ್ಯುಂಜಯ ಸ್ವಾಮೀಜಿಯೇ ಬೊಮ್ಮಾಯಿ ಸರ್ಕಾರ ನಮ್ಮ ತಲೆ ಮೇಲೆ ತುಪ್ಪ ಇಟ್ಟಿದೆ. ತಿನ್ನಲು ಬರಲ್ಲ, ವಾಸನೆ ತೆಗೆದುಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ.
ಶೇ.೧೦ ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಮುಟ್ಟಲು ಆಗಲ್ಲ. ಅದಾಗ್ಯೂ ಸರ್ಕಾರ ೨ಡಿ, ೨ಸಿ ವರ್ಗ ಮಾಡಿದ್ದಾರೆ. ಇದನ್ನು ಪಂಚಮಸಾಲಿ ಸಮಾಜ ಹಾಗೂ ಒಕ್ಕಲಿಗರ ವಿರೋಧಿಸಿದ್ದೇವೆ. ಕಾನೂನಿನ ಚೌಕಟ್ಟಿನಲ್ಲಿ ಯಾವುದೂ ಆಗದೇ ಇರುವ ನಿರ್ಣಯವನ್ನು ಮಾಡಿದ್ದಾರೆ. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರದಲ್ಲೂ ಸರ್ಕಾರ ಸಂಪುಟದಲ್ಲಿ ಪಾಸು ಮಾಡಸಿ ೯ನೇ ಶೆಡ್ಯೂಲ್ ನಲ್ಲಿ ಸೇರಿಸಲು ಕೇಂದ್ರಕ್ಕೆ ಕಳುಹಿಸಬಹುದಿತ್ತು. ಅತ್ತ ಪಾರ್ಲಿಮೆಂಟ್ ನಲ್ಲಿ ಸಚಿವರೇ ನಮ್ಮ ಮುಂದೆ ಅಂತ ಯಾವ ಪ್ರಸ್ತಾವನೆಯೂ ಇಲ್ಲ ಎಂದಿದ್ದಾರೆ. ಹೀಗಾಗಿ ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ಗೊಂದಲ ಮೂಡಿಸಿದೆ ಎಂದು ಹೇಳಿದರು.
ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಕಾಂಗ್ರೆಸ್ ಫಡಿಂಗ್ ಮಾಡುತ್ತಿದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಹೌದಪ್ಪ, ಪಂಚಮಸಾಲಿ ೩ನೇ ಪೀಠಕ್ಕೆ ಫಂಡ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು. ನಾವು ಇದರಲ್ಲಿ ಭಾಗವಹಿಸಲ್ಲ. ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಸಮಾಜಗಳಿಗೆ ನ್ಯಾಯ ಸಿಗಬೇಕು ಎನ್ನುವುದು ನಮ್ಮ ಬೇಡಿಕೆ. ನಮ್ಮ ಸರ್ಕಾರ ಬಂದರೆ ನಾವು ನುಡಿದಂತೆ ನಡೆಯುತ್ತೇವೆ ಎಂದು ತಿಳಿಸಿದರು.
ರಾಜ್ಯಕ್ಕೆ ಮತ್ತೆ ಮತ್ತೆ ಮೋದಿ ಬರೋದ್ಯಾಕೆ…?
ಚುನಾವಣೆ ಹೊತ್ತಲ್ಲಿ ರಾಜ್ಯಕ್ಕೆ ಮತ್ತೆ ಮತ್ತೆ ಮೋದಿ ಅವರು ಬರುತ್ತಿರುವುದು ಅವರ ಸರ್ಕಾರ ಇಲ್ಲಿ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ಅರ್ಥ ಎಂದು ವಿಶ್ಲೇಷಿಸಿದರು.
ಅಮಿತ್ ಶಾ ಅವರು ರಾಜ್ಯದ ಮುಖಂಡರನ್ನು ಬಿಟ್ಟು ನರೇಂದ್ರ ಮೋದಿ ಹಾಗೂ ತಮ್ಮ ನೇತೃತ್ವದಲ್ಲಿ ಚುನಾವಣೆ ಎಂದಿದ್ದಾರೆ. ಅಂದರೆ ಸಿಎಂ ಬೊಮ್ಮಾಯಿ ಫೇಲ್ ಆಗಿದ್ದಾರೆಂದು ತಾನೆ? ಇಲ್ಲಿ ಪ್ರಧಾನಮಂತ್ರಿಗಳು ಬಂದು ಆಡಳಿತ ನಡೆಸಲ್ಲ. ಡಬಲ್ ಇಂಜಿನ್ ಸರ್ಕಾರದಲ್ಲಿ ಅಭಿವೃದ್ದಿ ಮಾಡಿಸಬಹುದಿತ್ತು. ಮೂರುವರೆ ವರ್ಷ ಏನೂ ಮಾಡದೇ, ಜನರ ಹತ್ತಿರ ಹೋಗದೇ ಈಗ ಪ್ರಚಾರಕ್ಕಾಗಿ ಏನೇನೋ ಮಾಡಿದರೆ ಅದು ಪರಿಣಾಮ ಬೀರಲ್ಲ ಎಂದರು.