

ಜಯವಾಣಿ ಸುದ್ದಿಜಾಲ ಕಾರವಾರ
ಬೆಂಗಳೂರಿನ ಚಿಲುಮೆ ಪ್ರಕರಣ, ಗುಂಡಿಗಳ ಗಂಡಾಂತರ, 40 ಪರ್ಸೆಂಟ್ ಕಮೀಷನ್ ವಿಚಾರದಿಂದ ಜನರ ಮನಸ್ಸನ್ನು ಬೇರೆಡೆ ಹೊರಳಿಸಲು ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿಗೆ ಬಿಜೆಪಿ ಸರ್ಕಾರ ಒಂದೇ ದಿನದಲ್ಲಿ ಉಗ್ರ ಪಟ್ಟ ಕಟ್ಟಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಭಯೋತ್ಪಾದನೆ ಬೆಂಬಲಿಸುತ್ತಿಲ್ಲ. ಮಂಗಳೂರು ಸ್ಫೋಟದ ಆರೋಪಿಯನ್ನು ತಕ್ಷಣ ಬಂಧಿಸಿ, ಶೀಘ್ರ ಶಿಕ್ಷೆ ನೀಡಬೇಕು ಎಂಬುದು ನಮ್ಮದೂ ಒತ್ತಾಯವಾಗಿದೆ. ಆದರೆ, ತನಿಖೆ ನಡೆಸದೇ ಹೇಳಿಕೆ ನೀಡಿ ಜನರ ಮನಸ್ಸನ್ನು ಬೇರೆಡೆ ತಿರುಗಿಸುವ ಕಾರ್ಯ ಮಾಡುತ್ತಿದೆ.
ನಾಥೋರಾಂ ಘೋಡ್ಸೆಯನ್ನು ಟೆರರಿಸ್ಟ್ ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಒಂದು ಪಕ್ಷದಿಂದ ನಾವು ಸರ್ಟಿಫಿಕೇಟ್ ಪಡೆಯಬೇಕಿಲ್ಲ. ಕೇಶವ ಕೃಪ ಹೇಳಿದರೆ ನಾವು ಅದನ್ನು ಒಪ್ಪಲು ಸಿದ್ಧರಿಲ್ಲ. ಅಮಾಯಕರನ್ನು ಪಕ್ಕದ ಮನೆ ಬಾವಿಗೆ ತಳ್ಳಿ ಮಜ ನೋಡುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರನ್ನು ನಾವು ಸುಳ್ಳಿನ ತಳಹದಿಯ ಮೇಲೆ ಬೆಳೆಸಿಲ್ಲ. ನೈತಿಕ ಪೊಲೀಸ್‌ಗಿರಿ ಮಾಡುವುದನ್ನು ಕಲಿಸಿಲ್ಲ. ನಮ್ಮ ಪಕ್ಷದವರಿಗೆ ರಾಜಕೀಯ ಉದ್ಯೋಗವಲ್ಲ. ಒಂದು ಜವಾಬ್ದಾರಿಯಾಗಿದೆ ಎಂದರು.
ಡಿ.19 ರಂದು ಚುನಾವಣಾ ಪ್ರದೇಶ ಸಮಿತಿ ಸಭೆ ಇದೆ. ಅಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಮಾನದಂಡಗಳನ್ನು ನಿಗದಿ ಮಾಡಲಾಗುತ್ತದೆ. ಜನವರಿಯಲ್ಲಿ ಶೇ. 50 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಲಿದೆ ಎಂದರು. ಪಕ್ಷದ ಪ್ರಮುಖರಾದ ಚೈತ್ರಾ ಕೊಠಾರಕರ್, ಜಿ.ಪಿ.ನಾಯಕ, ಮೋಹನ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.