

ಯಳಂದೂರು: ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಹಸುವನ್ನು ಕೊಂದುಹಾಕಿದೆ.
ಗ್ರಾಮದ ಆರ್ಮುಗಂ ಎಂಬುವರು ತಮ್ಮ ಕೊಟ್ಟಿಗೆಯಲ್ಲಿ ಎಂಟು ಹಸುಗಳನ್ನು ಕಟ್ಟಿ ಹಾಕಿದ್ದರು. ಬುಧವಾರ ಮಧ್ಯರಾತ್ರಿ ದಾಳಿ ಮಾಡಿ ಒಂದು ಹಸುವನ್ನು ಎಳೆದೊಯ್ದು ಗ್ರಾಮದ ಹೊರ ವಲಯದಲ್ಲಿ ಇದರ ಅರ್ಧಭಾಗವನ್ನು ತಿಂದು ಬಿಸಾಡಿದೆ.
ಘಟನೆಯಿಂದ ಗಂಗವಾಡಿ ಹಾಗೂ ಕಳ್ಳಿಪುರದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಈ ಭಾಗದಲ್ಲಿ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿದ್ದು ಈಗ ಹಸುವಿನ ಮೇಲೆ ದಾಳಿ ಮಾಡಿರುವುದು ಗ್ರಾಮಸ್ಥರಲ್ಲಿ ಹಾಗೂ ರೈತರ ಆತಂಕವನ್ನು ಹೆಚ್ಚು ಮಾಡಿದೆ.
ಹಸು ಕಳೆದುಕೊಂಡಿರುವ ಮಾಲೀಕ ಆರ್ಮುಗಂ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆಯವರು ಬೋನು ಇಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.