

ಭಟ್ಕಳ: ಚಿನ್ನ ಕಳ್ಳಸಾಗಾಣಿಕೆ ಮಾಡುತ್ತಿದ್ದ ಇಬ್ಬರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ದುಬೈನಿಂದ ಮಂಗಳೂರಿಗೆ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರ ಬಳಿ ಅಕ್ರಮ ಚಿನ್ನ ಪತ್ತೆಯಾಗಿದೆ. ಬಂಧಿತರಲ್ಲಿ ಒಬ್ಬ ಭಟ್ಕಳ ಹಾಗೂ ಇನ್ನೊಬ್ಬ ಕಾಸರಕೋಡ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಭಟ್ಕಳದ ನಿವಾಸಿ 641 ಗ್ರಾಂ ಚಿನ್ನವನ್ನು ಪೇಸ್ಟ್ ರೂಪಕ್ಕೆ ಬದಲಾಯಿಸಿ ಐದು ದೊಡ್ಡ ಗಾತ್ರದ ಪ್ಲಾಸ್ಟಿಕ್ ಕ್ಯಾಪ್ಸೂಲ್ನೊಳಗೆ ತುಂಬಿಸಿ ಗುದದ್ವಾರದಲ್ಲಿಟ್ಟು ಸಾಗಾಟ ಮಾಡಿದ್ದ. ಇನ್ನೊಬ್ಬ ಕೇರಳದ ಕಾಸರಕೋಡಿನ ನಿವಾಸಿ 646 ಗ್ರಾಂ ಚಿನ್ನದ ಪೇಸ್ಟ್ ಅನ್ನು ಒಳಚಡ್ಡಿಯಲ್ಲಿ ವಿಶೇಷ ಜೇಬು ತಯಾರಿಸಿ ಅದರಲ್ಲಿ ಚಿನ್ನದ ಪೇಸ್ಟ್ ತುಂಬಿದ್ದ ಪ್ಯಾಕೆಟ್ ಅಡಗಿಸಿಟ್ಟಿದ್ದ. ಪತ್ತೆಯಾದ ಚಿನ್ನ 999 ಪರಿಶುದ್ಧತೆ ಹೊಂದಿದೆ.
ಆರೋಪಿಗಳಿಗೆ ಭಟ್ಕಳ ಮತ್ತು ಕಾಸರಗೋಡಿನ ಚಿನ್ನ ಸ್ಮಗ್ಲಿಂಗ್ ಗ್ಯಾಂಗ್ ನಂಟು ಇರುವ ಬಗ್ಗೆ ಶಂಕೆ ಇದೆ. ದುಬೈ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಲಿಂಕ್ ಇರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳಿಗೆ ಪ್ರಬಲ ಲಿಂಕ್ ಇರುವ ಬಗ್ಗೆ ಡಿಆರ್ಐ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.