

ಬಾಗೇಪಲ್ಲಿ : ಕಳೆದ ಕೆಲ ದಿನಗಳಿಂದ ಸುರಿದ ಜಡಿ ಮಳೆಗೆ ಬಾಗೇಪಲ್ಲಿ ಪಟ್ಟಣಕ್ಕೆ ಕುಡಿಯುವ ನೀರಿನ ಮೂಲವಾದ ಚಿತ್ರಾವತಿ ಜಲಾಶಯ ಭರ್ತಿಯಾಗಿ ನೀರು ಹೊರಹರಿಯುತ್ತಿದ್ದು, ಪಟ್ಟಣ ಮತ್ತು ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಸಂತಸ ಮೂಡಿದೆ.
ತಾಲೂಕಿನ ಪರಗೋಡು ಗ್ರಾಮದ ಸಮೀಪದಲ್ಲಿ ನಿರ್ಮಾಣ ಮಾಡಿರುವ ಚಿತ್ರಾವತಿ ಜಲಾಶಯ ಕಳೆದ ವರ್ಷ ಮಳೆಯ ಕೊರತೆಯಿಂದ ತುಂಬಿರಲಿಲ್ಲ. ಪಟ್ಟಣದ 23 ವಾರ್ಡ್‌ಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ನಿರ್ಮಾಣ ಮಾಡಿರುವ ಚಿತ್ರಾವತಿ ಜಲಾಶಯ 0.7 ಟಿಎಂಸಿ ನೀರು ಶೇಖರಣೆ ಸಾಮರ್ಥ್ಯ ಹೊಂದಿದ್ದು, ಜಲಾಶಯದಲ್ಲಿ ಹೂಳು ತುಂಬಿರುವ ಕಾರಣ ನೀರು ಶೇಖರಣೆ ಪ್ರಮಾಣ ಇದೀಗ ಕಡಿಮೆಯಾಗಿದೆ.
ಚಿತ್ರಾವತಿ ಜಲಾನಯನ ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಿದ ಭರ್ಜರಿ ಮಳೆಯಿಂದಾಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿ ತುಂಬಿ ಹರಿಯುತ್ತಿದೆ. ವಿಷಯ ತಿಳಿಯುತ್ತಿದ್ದಂತೆಯೇ ಜಲಾಶಯವನ್ನು ವೀಕ್ಷಿಸಲು ಜನರು ತಂಡೋಪ ತಂಡವಾಗಿ ಧಾವಿಸುತ್ತಿದ್ದಾರೆ. ಮತ್ತೊಂದೆಡೆ ಬಾಗೇಪಲ್ಲಿ ಮತ್ತು ಸುತ್ತಮುತ್ತಲಿನ ಜನತೆಯ ಮುಖದಲ್ಲಿ ಹರ್ಷದ ಹೊನಲು ಚಿಮ್ಮಿದೆ. ಒಮ್ಮೆ ಚಿತ್ರಾವತಿ ಜಲಾಶಯ ತುಂಬಿ ಹರಿದರೆ ಕನಿಷ್ಠ 2 ವರ್ಷಗಳವರೆಗೆ ಬಾಗೇಪಲ್ಲಿ ಪಟ್ಟಣದಲ್ಲಿ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎನ್ನಲಾಗುತ್ತಿದೆ.
ಚಿತ್ರಾವತಿ ಜಲಾಶಯ ಭರ್ತಿಯಾಗಿರುವುದು ಸಂತಸ ತಂದಿದೆ. ಪ್ರಮುಖವಾಗಿ ಬಾಗೇಪಲ್ಲಿ ಜನತೆಗೆ ಕುಡಿಯುವ ನೀರಿನ ಮೂಲವಾಗಿರುವ ಜಲಾಶಯ ಭರ್ತಿಯಾಗಿರುವುದರಿಂದಾಗಿ ನೀರಿನ ಸಮಸ್ಯೆ ಎದುರಾಗುವುದಿಲ್ಲ. ನೀರು ಪೋಲಾಗದಂತೆ ಎಚ್ಚರವಹಿಸಬೇಕಾಗುತ್ತದೆ. ಶುಕ್ರವಾರ ಪುರಸಭೆ ವತಿಯಿಂದ ಬಾಗಿನ ಅರ್ಪಿಸಲಾಗುವುದು. - ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ, ಬಾಗೇಪಲ್ಲಿ