ಚಿಕ್ಲಿಹೊಳೆ ಅಣೆಕಟ್ಟೆ ಫಿಟ್ನೆಸ್ ಪರಿಶೀಲನೆ

18Kush01
ಚಿಕ್ಲಿಹೊಳೆ ಅಣೆಕಟ್ಟೆಯನ್ನು ಡಿಎಸ್‌ಆರ್‌ಟಿ ಸಲಹೆಗಾರ ಧಾರವಾಡದ ಎಸ್.ಬಿ.ಕೋಯಿಮತ್ತೂರು ನೇತೃತ್ವದ ತಂಡ ಪರಿಶೀಲನೆ ನಡೆಸುತ್ತಿರುವುದು. ತಂಡದ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
Published on

ಕುಶಾಲನಗರ: ಸಮೀಪದ ಚಿಕ್ಲಿಹೊಳೆ ಡ್ಯಾಂ ಫಿಟ್ನೆಸ್ ಪರಿಶೀಲನೆಗೆ 10 ವರ್ಷಗಳ ನಂತರ ಶನಿವಾರ ಡಿಎಸ್‌ಆರ್‌ಟಿ ತಂಡ ಭೇಟಿ ನೀಡಿತ್ತು.

ಕೇಂದ್ರ ಸರಕಾರದ ಸೂಚನೆ ಮೇರೆಗೆ ರಾಜ್ಯ ಸರಕಾರದ ಅಧೀನಕ್ಕೆ ಒಳಪಡುವ ರಾಜ್ಯ ಅಣೆಕಟ್ಟೆ ಸುರಕ್ಷತಾ ತಪಾಸಣೆ ತಂಡ (ಡಿಎಸ್‌ಆರ್‌ಟಿ) ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಧೀನಕ್ಕೆ ಒಳಪಡುವ ಚಿಕ್ಲಿಹೊಳೆಗೆ ಭೇಟಿ ನೀಡಿತ್ತು.

ನೀರಿನ ಸಂಗ್ರಹ ಸಾಮರ್ಥ್ಯ ಸೇರಿದಂತೆ ಅಣೆಕಟ್ಟೆಯ ಪ್ರತಿ ಹಂತದ ಬಗ್ಗೆ ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆದ ತಂಡದ ಸದಸ್ಯರು, ಅಣೆಕಟ್ಟೆ ಪೂರ್ಣ ಭರ್ತಿಯಾದಾಗ ಉಂಟಾಗುವ ನೀರಿನ ಸೋರಿಕೆ ಬಗ್ಗೆಯೂ ಮಾಹಿತಿ ಪಡೆಯಿತು.

ಅಣೆಕಟ್ಟೆಯ ಮುಖ್ಯ ನಾಲೆಗಳ ಎರಡೂ ಗೇಟ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದ ತಂಡ, ಅಣೆಕಟ್ಟೆ ತುಂಬಿದ ನಂತರ ಹೆಚ್ಚುವರಿ ನೀರು ನದಿಗೆ ಹರಿಯುವ ಪ್ರದೇಶವನ್ನು ವೀಕ್ಷಿಸಿ ಅಗತ್ಯ ಮಾಹಿತಿ ಸಂಗ್ರಹಿಸಿತು. ಜತೆಗೆ, ಅಣೆಕಟ್ಟೆ ನಿರ್ಮಾಣ ಸಂದರ್ಭದ ಒಳಹರಿವಿನ ಪ್ರಮಾಣ ಮತ್ತು ಈಗಿರುವ ಒಳಹರಿವಿನ ಪ್ರಮಾಣದ ಬಗ್ಗೆಯೂ ಅಂಕಿ ಅಂಶಗಳನ್ನು ದಾಖಲಿಸಿಕೊಂಡಿತು.

ಅಣೆಕಟ್ಟೆಯ ಸುರಕ್ಷತೆ ನಿಟ್ಟಿನಲ್ಲಿ ತಂಡ ಕೂಲಂಕಷವಾಗಿ ಪರಿಶೀಲಿಸಿ ಕೇಂದ್ರ ತಂಡಕ್ಕೆ ವರದಿ ಸಲ್ಲಿಸಲಿದೆ. ಈ ವರದಿ ಆಧರಿಸಿ ನೀರಾವರಿ ನಿಗಮದ ಅಧಿಕಾರಿಗಳು ಅಣೆಕಟ್ಟೆ ಸುರಕ್ಷತೆಗೆ ಬೇಕಾದ ಕಾಮಗಾರಿ ಬಗ್ಗೆ ಕ್ರಿಯಾಯೋಜನೆ ಸಿದ್ಧಪಡಿಸಿ ರಾಜ್ಯ ಸರಕಾರದ ಮೂಲಕ ಕೇಂದ್ರ ಮಂಡಳಿಗೆ ಕಳುಹಿಸುತ್ತದೆ. ಇದರನ್ವಯ ಕೇಂದ್ರ ಸರಕಾರ ವಿಶ್ವ ಬ್ಯಾಂಕ್ ನೆರವಿನೊಂದಿಗೆ ರಾಜ್ಯದ ನೀರಾವರಿ ನಿಗಮಕ್ಕೆ ಹಣ ನೀಡಲಿದೆ. ಆ ಮೂಲಕ ಅಣೆಕಟ್ಟೆಯ ಸುರಕ್ಷತಾ ದೃಷ್ಠಿಯಿಂದ ಕೈಗೊಳ್ಳಬೇಕಾದ ಕಾಮಗಾರಿಗಳಿಗೆ ಈ ಯೋಜನೆ ಸಹಕಾರಿ ಆಗಲಿದೆ.

10 ವರ್ಷಗಳಿಗೊಮ್ಮೆ ಪರಿಶೀಲನೆ: ಕೇಂದ್ರದ ನಿರ್ದೇಶನದಂತೆ ಜಲಾಶಯಗಳನ್ನು 10 ವರ್ಷಕ್ಕೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ. ಅದರಂತೆ 2012ರ ಬಳಿಕ 2023 ಕ್ಕೆ ಚಿಕ್ಲಿಹೊಳೆ ಅಣೆಕಟ್ಟೆ ತಪಾಸಣೆ ನಡೆಸಲಾಗಿದೆ. ಜಿಲ್ಲೆಯ ಮತ್ತೊಂದು ಪ್ರಮುಖ ಅಣೆಕಟ್ಟೆ ಹಾರಂಗಿ ಜಲಾಶಯವನ್ನು 2014 ರಲ್ಲಿ ಪರಿಶೀಲನೆ ನಡೆಸಿದೆ. ತಪಾಸಣೆ ನಡೆಸಿ ಸಲ್ಲಿಸಿದ ವರದಿಯ ಮರು ಪರಿಶೀಲನೆ ಬಳಿಕ ಅಗತ್ಯವಿರುವ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲು ಕೇಂದ್ರ ಅನುದಾನ ಒದಗಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net