ಚಿಕ್ಕೋಡಿ ತಾಲೂಕಾಸ್ಪತ್ರೆಗೆ ಬೇಕಿದೆ ಚಿಕಿತ್ಸೆ

25Anand1 story
Published on

ಆನಂದ ಭಮ್ಮನ್ನವರ ಚಿಕ್ಕೋಡಿ

ಪ್ರತ್ಯೇಕ ಜಿಲ್ಲಾ ಸ್ಥಾನಮಾನ ಪಡೆಯುವ ಸನಿಹದಲ್ಲಿರುವ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಹಾಗೂ ಅಗತ್ಯ ವೈದ್ಯಕೀಯ ಸೇವೆಗಳ ಕೊರತೆಯಿಂದ ಬಳಲುತ್ತಿದೆ. ತಜ್ಞ ವೈದ್ಯರ ಕೊರತೆ ಮತ್ತು ಅಗತ್ಯ ಚಿಕಿತ್ಸೆ ಲಭಿಸದ ಕಾರಣ ರೋಗಿಗಳು ಬೆಳಗಾವಿ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುವಂತಾಗಿದೆ.

ಜನರಿಗೆ ಕಡಿಮೆ ಹಣದಲ್ಲಿ ಅಗತ್ಯ ವೈದ್ಯಕೀಯ ಸೌಕರ್ಯ, ಆರೋಗ್ಯ ಸೇವೆಗಳು ದೊರೆಯಲೆಂದು ಸರ್ಕಾರ ಪಟ್ಟಣದಲ್ಲಿ ಪ್ರಾರಂಭಿಸಿರುವ ಸಾರ್ವಜನಿಕ ಆಸ್ಪತ್ರೆ ಹೆಸರಿಗೆ ಮಾತ್ರ ಎಂಬಂತಾಗಿದೆ. ಇಲ್ಲಿನ ಆಸ್ಪತ್ರೆಗೆ ನಿತ್ಯ 300ರಿಂದ 400 ಹೊರ ರೋಗಿಗಳು ಚಿಕಿತ್ಸೆಗೆಂದು ಆಗಮಿಸುತ್ತಾರೆ. ಆದರೆ, ಸಿಬ್ಬಂದಿ ಹಾಗೂ ತಜ್ಞ ವೈದ್ಯರ ಕೊರತೆಯಿಂದ ಪರದಾಡುವಂತಾಗಿದೆ.

ಜಿಲ್ಲಾಸ್ಪತ್ರೆಯೇ ಆಸರೆ: ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯ ಸೌಕರ್ಯ ಇಲ್ಲದ ಪರಿಣಾಮ ಇಲ್ಲಿ ದಾಖಲಾಗುವ ಬಹುತೇಕ ರೋಗಿಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ವೈದ್ಯರು ಶಿಾರಸು ಮಾಡುತ್ತಿದ್ದಾರೆ. ಕಳೆದೊಂದು ವರ್ಷದಲ್ಲಿ 1,253 ರೋಗಿಗಳು ಚಿಕಿತ್ಸೆಗೆ ದಾಖಲಾಗಿದ್ದಾರೆ. ಅಗತ್ಯ ಔಷಧೋಪಚಾರ, ಐಸಿಯು ಘಟಕದ ಅವಶ್ಯಕತೆ ಮತ್ತು ತಜ್ಞ ವೈದ್ಯರ ಕೊರತೆ ಹಿನ್ನೆಲೆಯಲ್ಲಿ 766 ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಶಿಾರಸು ಮಾಡಲಾಗಿದೆ.

ಬೇಕಿದೆ ಪ್ರತ್ಯೇಕ ಜಿಲ್ಲಾಸ್ಪತ್ರೆ: ಚಿಕ್ಕೋಡಿ, ಅಥಣಿ, ರಾಯಬಾಗ, ನಿಪ್ಪಾಣಿ, ಕಾಗವಾಡ ಸೇರಿ ಈ ಭಾಗದ ಜನರು ತುರ್ತು ಪರಿಸ್ಥಿತಿಯಲ್ಲಿ ದೂರದ ಬೆಳಗಾವಿ ಜಿಲ್ಲಾಸ್ಪತ್ರೆಯನ್ನೇ ಅವಲಂಬಿಸಬೇಕಾಗಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಹಾಗೂ ಚಿಕ್ಕೋಡಿ ಉಪವಿಭಾಗದ ಜನರ ಆರೋಗ್ಯದ ದೃಷ್ಟಿಯಿಂದ ಚಿಕ್ಕೋಡಿಗೆ ಪ್ರತ್ಯೇಕ ಜಿಲ್ಲಾಸ್ಪತ್ರೆ ನಿರ್ಮಿಸಬೇಕು ಎನ್ನುವುದು ಇಲ್ಲಿನ ಜನರ ಒತ್ತಾಸೆಯಾಗಿದೆ.

ಮಂಜೂರಾದ 91 ಹುದ್ದೆ ಪೈಕಿ 37 ಖಾಲಿ: ಚಿಕ್ಕೋಡಿ ತಾಲೂಕಾಸ್ಪತ್ರೆಗೆ ಮಂಜೂರಾದ 91 ಹುದ್ದೆಗಳ ಪೈಕಿ 54 ಹುದ್ದೆಗಳ ಮಾತ್ರ ಭರ್ತಿಯಾಗಿವೆ. ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ (ಜನರಲ್ ಫಿಸಿಷಿಯನ್), ಅರಿವಳಿಕೆ ತಜ್ಞ, ಚಿಕ್ಕ ಮಕ್ಕಳ ತಜ್ಞ , ಶಸ್ತ್ರ ಚಿಕಿತ್ಸಕ ಸೇರಿ 37 ಹುದ್ದೆಗಳು ಖಾಲಿ ಇವೆ. ಪರಿಣಾಮ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಗಂಭೀರ ಪ್ರಕರಣದಲ್ಲಿ ಚಿಕಿತ್ಸೆ ಮರಿಚೀಕೆಯಾಗಿದೆ.

ತಜ್ಞ ವೈದ್ಯರ ಕೊರತೆಯಿಂದ ರೋಗಿಗಳು ಗುಣಮಟ್ಟದ ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಕೂಡಲೇ ಅಗತ್ಯ ತಜ್ಞ ವೈದ್ಯರು ಮತ್ತು ಸಿಬ್ಬಂದಿ ನೇಮಿಸಬೇಕು. ಈ ಭಾಗದ ರೋಗಿಗಳ ಅನುಕೂಲಕ್ಕಾಗಿ ಪ್ರತ್ಯೇಕ ಜಿಲ್ಲಾಸ್ಪತ್ರೆ ಮಂಜೂರ ಮಾಡಬೇಕು. | ಮಲ್ಲಿಕಾರ್ಜುನ ಪಾಟೀಲ ಚಿಕ್ಕೋಡಿ ಆಸ್ಪತ್ರೆಯಲ್ಲಿ ಖಾಲಿಯಿರುವ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡು ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಉಳಿದಂತೆ ತಜ್ಞ ವೈದ್ಯರ ಹುದ್ದೆಗಳಿಗೆ ಸರ್ಕಾರದಿಂದ ನೇಮಕ ಆಗಬೇಕಿದೆ. | ಈಶ್ವರ ಗಡಾದ ಜಿಲ್ಲಾ ಆರೋಗ್ಯ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net