

ಸರಗೂರು: ಸರ್ಕಾರದ ವತಿಯಿಂದ ಚಿಕ್ಕದೇವಮ್ಮನ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ ಎಂದು ಅರಣ್ಯ ಮತ್ತು ವಿಹಾರ ಧಾಮಗಳ ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕಿನ ಚಿಕ್ಕದೇವಮ್ಮನ ಬೆಟ್ಟದಲ್ಲಿ ಶುಕ್ರವಾರ ಚಿಕ್ಕದೇವಮ್ಮ ತಾಯಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ಕಳೆದ ಬಾರಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೆಟ್ಟದ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ನೀಡಿತ್ತು. 2 ಕೋಟಿ ರೂ.ಅನುದಾನದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಸುಮಾರು 7 ಕೋಟಿ ರೂ.ಅನುದಾನವನ್ನು ನನ್ನ ಅವಧಿಯಲ್ಲಿ ಬಳಸಿ ಬೆಟ್ಟದ ಅಭಿವೃದ್ಧಿ ಜತೆಗೆ ಪಾಕಶಾಲೆ, ತಡೆಗೋಡೆ, ರಸ್ತೆ, ಮೆಟ್ಟಿಲು ನಿರ್ಮಾಣ ಮಾಡಲಾಗುವುದು. ನನ್ನ ತಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಚಿಕ್ಕದೇವಮ್ಮ ಬೆಟ್ಟದ ದೇವಸ್ಥಾನ ಹಳೆಯದಾಗಿತ್ತು. ಎಲ್ಲರ ಸಹಕಾರದೊಂದಿಗೆ ದೇವಸ್ಥಾನ ನಿರ್ಮಾಣ ಮಾಡಲಾಯಿತು ಎಂದರು.
ಮೈಸೂರಿನಲ್ಲಿ ಚಾಮುಂಡಿ ದೇವಿಯಂತೆ ಚಿಕ್ಕದೇವಮ್ಮನ ಬೆಟ್ಟದಲ್ಲಿ ಚಿಕ್ಕದೇವಮ್ಮ ನೆಲೆಸಿದ್ದಾಳೆ. ಈ ಸ್ಥಳವನ್ನು ಪ್ರವಾಸಿ ತಾಣವಾಗಿ ಮಾಡಲು ತಾಲೂಕಿನ ಜನತೆ ಆಶೀರ್ವಾದ ಮಾಡಿದ್ದಾರೆ. ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದರು.
ಚಿಕ್ಕದೇವಮ್ಮ ಬೆಟ್ಟಕ್ಕೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಬೆಟ್ಟದಲ್ಲಿ ಕುಡಿಯುವ ನೀರು, ವಾಹನ ನಿಲುಗಡೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. ಬೆಟ್ಟದಲ್ಲಿ ಪಾಕಶಾಲೆ ಕಾಮಗಾರಿ ನಡೆಯುತ್ತಿದೆ. ಶೀಘ್ರ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಎಲ್ಲ ಜಲಾಶಯಗಳಿಗಿಂತ ಮುಂಚಿತವಾಗಿ ಕಬಿನಿ ಜಲಾಶಯ ಭರ್ತಿಯಾಗಿದ್ದರೂ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಬಾಗಿನ ಸಲ್ಲಿಸಿಲ್ಲ ಎಂಬ ಆಕ್ರೋಶ ತಾಲೂಕಿನ ಜನರಲ್ಲಿ ಇದೆ. ಆದರೆ, ಕೆಆರ್‌ಎಸ್ ಜಲಾಶಯ 45 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಈ ಅವಧಿಯಲ್ಲಿ ಭರ್ತಿಯಾದ ಹಿನ್ನೆಲೆಯಲ್ಲಿ ಸಿಎಂ ಹಾಗೂ ಡಿಸಿಎಂ ಕೆಆರ್‌ಎಸ್‌ಗೆ ಬಾಗಿನ ಸಲ್ಲಿಸಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯವಾಗಲಿ, ತಾರತಮ್ಯವಾಗಲಿ ಎಲ್ಲ. ಜು.16 ಅಥವಾ 17ರಂದು ಕಬಿನಿ ಜಲಾಶಯಕ್ಕೆ ಸಿಎಂ ಬಾಗಿನ ಅರ್ಪಿಸುವರು. ಎಲ್ಲ ಸಿದ್ಧತೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ಗೆ ನಡೆದ ಚುನಾವಣೆಯಲ್ಲಿ ಸಮ ಮತಗಳು ಬಂದಿದ್ದು, ನಾನೇ ಗೆಲ್ಲುವುದು ಖಚಿತ ಎಂದು ತಿಳಿಸಿದರು.
ಪಪಂ ಸದಸ್ಯ ಶ್ರೀನಿವಾಸ, ತಾಪಂ ಮಾಜಿ ಅಧ್ಯಕ್ಷ ಹಾಗೂ ಅಖಲಿ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಗುರುಸ್ವಾಮಿ, ಯುವ ಸಮಿತಿ ಅಧ್ಯಕ್ಷ ಲಂಕೆ ಪಿ.ನಂದೀಶ್, ತಂಬಾಕು ಮಂಡಳಿ ಕ್ರಾಪ್ ಕಮಿಟಿ ಸದಸ್ಯ ಪರಶಿವಮೂರ್ತಿ, ಜಿಪಂ ಸದಸ್ಯ ಬಸವರಾಜು, ಮಲ್ಲೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದರಾಜು, ಎಸ್.ಮರಿದೇವಯ್ಯ, ಪುರಸಭೆ ಸದಸ್ಯ ಪ್ರೇಮ್, ಬೆಟ್ಟದ ಪಾರುಪತ್ತೇದಾರ ಮಹದೇವಸ್ವಾಮಿ, ಉಮೇಶ್, ರವಿ, ದರ್ಶನ್, ಕೃಷ್ಣ, ಮಹದೇವ, ನವೀನ್, ಸುರೇಶ್, ಶಶಿ ಪಾಟೀಲ್ ಹಾಜರಿದ್ದರು.