ಚಿಕಿತ್ಸೆ ಪಡೆಯಲು ರೋಗಿಗಳ ಪರದಾಟ

9KWR3
Published on

ಕಾರವಾರ: ಕರೊನಾ ಲಾಕ್​ಡೌನ್ ಗಂಭೀರ ಆರೋಗ್ಯ ಸಮಸ್ಯೆ ಇದ್ದವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕ್ಯಾನ್ಸರ್, ಕಿಡ್ನಿ ವೈಫಲ್ಯ ಮುಂತಾದ ಗಂಭೀರ ಸಮಸ್ಯೆಯಿಂದ ಬಳಲುತ್ತಿರುವ ಸಾಕಷ್ಟು ರೋಗಿಗಳು ಜಿಲ್ಲೆಯಲ್ಲಿದ್ದಾರೆ.

ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ವ್ಯವಸ್ಥೆ ಇಲ್ಲದ ಕಾರಣ ಇಂಥ ರೋಗಿಗಳು ಗೋವಾ, ಮಣಿಪಾಲ ಅಥವಾ ಧಾರವಾಡ ಜಿಲ್ಲೆಗೆ ಹೋಗುತ್ತಾರೆ. ಅಂಥವರಿಗೆ ದೊಡ್ಡ ಸಮಸ್ಯೆಯಾಗಿದೆ. ಬಸ್, ರೈಲು, ಆಟೋ ಮುಂತಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ಸ್ಥಗಿತವಾಗಿವೆ. ಹಾಗಾಗಿ ದುಬಾರಿ ಬೆಲೆ ತೆತ್ತು ಖಾಸಗಿ ವಾಹನವನ್ನು ಬಾಡಿಗೆ ಮಾಡಿಕೊಂಡೇ ಹೋಗಬೇಕಿದೆ. ಹಲವರು ಬಾಡಿಗೆಗೆ ಬರಲು ಒಪ್ಪುತ್ತಿಲ್ಲ.

ಅದಕ್ಕಾಗಿ ಅನುಮತಿಗಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಬಂದಿದೆ. ಸದ್ಯ ಇ ಪಾಸ್ ವ್ಯವಸ್ಥೆ ಮಾಡಿದ್ದರೂ ಅದನ್ನು ಪಡೆಯಲು ತಹಸೀಲ್ದಾರ್ ಕಚೇರಿಗಳಿಗೆ ಬರಬೇಕಿದೆ. ಕೆಲಸದ ಒತ್ತಡದಿಂದಲೋ ಅಥವಾ ದರ್ಪದಿಂದಲೋ ಹಲವು ಕಚೇರಿಗಳಲ್ಲಿ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ. ಇನ್ನು ದಾಖಲೆಗಳನ್ನು ಝುರಾಕ್ಸ್ ಮಾಡಲು, ಫೋಟೋ ತೆಗೆಸಲೂ ಅಂಗಡಿಗಳಿಲ್ಲ. ಪಾಸ್ ಮಾಡಿಸಲು ಕಚೇರಿಗೆ ತೆರಳುವಾಗ ಪೊಲೀಸರ ಭಯವೂ ಉಂಟಾಗುತ್ತದೆ. ಇದಕ್ಕೆ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆ ಸಾರ್ವಜನಿಕರಿಂದ ಕೇಳಿ ಬಂದಿದೆ.

ಸದ್ಯಕ್ಕಿರುವ ವ್ಯವಸ್ಥೆಯೇನು ?: ಸದ್ಯ ಆರೋಗ್ಯ ಸಮಸ್ಯೆ ಇರುವವರು ಆಧಾರ ಕಾರ್ಡ್, ವಾಹನ ಸಂಖ್ಯೆ, ಆರೋಗ್ಯ ದಾಖಲೆಗಳ ವಿವರನ್ನು ತಹಸೀಲ್ದಾರರಿಗೆ ನೀಡಿ ಅರ್ಜಿ ಸಲ್ಲಿಸಬೇಕು. ಅವರು ಪರಿಶೀಲನೆ ನಡೆಸಿ ಅಂತರ ಜಿಲ್ಲಾ ಓಡಾಟಕ್ಕಾದರೆ ಉಪವಿಭಾಗಾಧಿಕಾರಿಗಳಿಗೆ, ಹೊರ ಜಿಲ್ಲೆಗೆ ಹೋಗುವುದಿದ್ದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಆನ್​ಲೈನ್ ಮೂಲಕ ಕಳಿಸುತ್ತಾರೆ. ಅವರು ಪರಿಶೀಲನೆ ನಡೆಸಿ ಅನುಮೋದನೆ ನೀಡುತ್ತಾರೆ. ನಂತರ ತಹಸೀಲ್ದಾರ್ ಕಚೇರಿಯಲ್ಲೇ ಪಾಸ್ ಮುದ್ರಣ ಮಾಡಿ ನೀಡಲಾಗುತ್ತದೆ. ಇನ್ನು ಪೊಲೀಸ್ ಠಾಣೆಗಳಲ್ಲಿಯೂ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ಎಸ್​ಪಿ ಪಾಸ್ ವಿತರಣೆ ಮಾಡುವ ಅಧಿಕಾರ ಹೊಂದಿದ್ದಾರೆ.

ಎಷ್ಟು ಪಾಸ್ ವಿತರಣೆ?: ಇದುವರೆಗೆ ಜಿಲ್ಲಾಧಿಕಾರಿ ಕಚೇರಿಯಿಂದ 99 ಜನರಿಗೆ ಆರೋಗ್ಯ ಸಮಸ್ಯೆಯ ಸಂಬಂಧ ಓಡಾಡುವ ಸಲುವಾಗಿ ಪಾಸ್ ವಿತರಿಸಲಾಗುತ್ತಿದೆ. ತುರ್ತು ಸೇವೆಗಳಿಗಾಗಿ 86, ಇತರ ವಿವಿಧ ಕಾರಣಗಳಿಗಾಗಿ 63 ಪಾಸ್ ವಿತರಣೆ ಮಾಡಲಾಗಿದೆ.

ಸಾಕಷ್ಟು ಕರೆಗಳು: ವಿಜಯವಾಣಿ, ದಿಗ್ವಿಜಯ ನ್ಯೂಸ್ ಮಂಗಳವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಅವರ ಪೋನ್ ಇನ್ ಕಾರ್ಯಕ್ರಮದಲ್ಲೂ ಸಾಕಷ್ಟು ಕರೆಗಳು ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಬಂದವು. ಕಾರ್ಯಕ್ರಮದ ಬಳಿಕವೂ ಇಂಥ ಹಲವು ಕರೆಗಳು ಬರುತ್ತಿವೆ. ಆರೋಗ್ಯ ಸಮಸ್ಯೆ ಇರುವ ಎಲ್ಲರಿಗೂ ಸೂಕ್ತ ಚಿಕಿತ್ಸೆಗೆ ಪಾಸ್ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಭರವಸೆ ನೀಡಿದ್ದಾರೆ.

ಡಯಾಲಿಸಿಸ್​ಗಾಗಿ ಓಡಾಟ: ಅಮದಳ್ಳಿಯ ಜನಾರ್ದನ ಚಂದ್ರು ಕುಮಾರ್ ಅವರಿಗೆ ಎರಡೂ ಕಣ್ಣು ಕಾಣದು. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅವರು ಆಗಾಗ ಡಯಾಲಿಸಿಸ್ ಮಾಡಿಸಬೇಕಿದೆ. ಕಾರವಾರ ಆಸ್ಪತ್ರೆಗೆ ಡಯಾಲಿಸಿಸ್​ಗೆ ಬರಲು ಅವರು ತೊಂದರೆಪಡುತ್ತಿದ್ದಾರೆ. ವಯಸ್ಸಿಗೆ ಬಂದ ಅವರ ಮಗ ವರ್ಷದ ಹಿಂದೆ ನಾಪತ್ತೆಯಾಗಿದ್ದಾನೆ. ಪತಿ ಇವರ ಸೇವೆಯಲ್ಲಿ ನಿರತರಾಗಿದ್ದಾರೆ. ಬೇರೆ ದುಡಿಮೆಯಿಲ್ಲದೆ, ಆರೋಗ್ಯ ಸರಿಯಿಲ್ಲದೆ ಜೀವನವೇ ಕಷ್ಟವಾಗಿದೆ. ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ ಬುಧವಾರ ಅವರಿಗೆ ಓಡಾಡಲು ವಾಹನ ವ್ಯವಸ್ಥೆ ಮಾಡಿ ಅಕ್ಕಿ ನೀಡಿದರು. ಸಹೃದಯಿಗಳು ಅವರಿಗೆ ಸಹಕಾರ ನೀಡಬೇಕು ಎಂದು ಅವರು ವಿನಂತಿ ಮಾಡಿದ್ದಾರೆ.

ವಿಜಯವಾಣಿ ಕಳಕಳಿ: ಪಾಸ್​ಗಾಗಿ ಮನೆಯಲ್ಲೇ ಕುಳಿತು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಬೇಕು. ಸದ್ಯ ಜಿಲ್ಲಾಡಳಿತದಿಂದ ಮನೆ, ಮನೆ ಆರೋಗ್ಯ ಸಮೀಕ್ಷೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಇರುವವರನ್ನು ಗುರುತಿಸಿ, ಡಾಟಾ ಬೇಸ್ ಸಿದ್ಧಪಡಿಸಬೇಕು. ಲಾಕ್​ಡೌನ್ ಪಾಸ್ ವಿತರಣೆ ಸಮಯದಲ್ಲಿ ರೋಗಿಗಳ ಡಾಟಾ ಬೇಸ್ ಮೂಲಕ ಸಮಸ್ಯೆ ಗಂಭೀರತೆ ಖಚಿತ ಮಾಡಿಕೊಳ್ಳಲು ಸಾಧ್ಯ. ಅಲ್ಲದೆ, ಅಗತ್ಯ ಬಿದ್ದಲ್ಲಿ ತುರ್ತು ವ್ಯವಸ್ಥೆಯನ್ನೂ ಮಾಡಬಹುದಾಗಿದೆ.

ಆರೋಗ್ಯ ಸಮಸ್ಯೆ ಇದ್ದವರು ಯಾರೇ ಬಂದರೂ ಅವರಿಗೆ ಪಾಸ್ ನೀಡುತ್ತಿದ್ದೇವೆ. ಈಗಂತೂ ಯಾವುದೇ ಕಾರಣಕ್ಕೂ ವಿಳಂಬ ಮಾಡದಂತೆ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಾಗರಾಜ ಸಿಂಗ್ರೇರ್ , ಅಪರ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net