ಚಿಕನ್ ಸೇವಿಸಿ 30 ಬಾಲಕಿಯರು ಅಸ್ವಸ್ಥ: ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ, ವಿಚಾರಣೆ

hpt
ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಚಿಕಿತ್ಸೆ ಪಡೆಯುತ್ತಿರುವ ಸರ್ಕಾರಿ ಎಸ್ಟಿ ವಸತಿ ನಿಲಯದ ಬಾಲಕಿಯರು.
Published on

ಹೊಸಪೇಟೆ: ವಿಷಾಹಾರ ಸೇವಿಸಿ ನಗರದ ಸರ್ಕಾರಿ ಪರಿಶಿಷ್ಟ ಪಂಗಡದ ವಸತಿ ನಿಲಯದ 30 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ.

ನಗರದ ಸರ್ಕಾರಿ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಕೆಲ ವಿದ್ಯಾರ್ಥಿನಿಯರಿಗೆ ಗುರುವಾರ ಬೆಳಗಿನ ಜಾವ ವಾಂತಿ-ಭೇದಿ ಕಾಣಿಸಿಕೊಂಡಿದ್ದರಿಂದ ಉಪವಿಭಾಗ ಮಟ್ಟದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಇತರರು ಹೊರ ರೋಗಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆ ವಿವರ: ಇಲ್ಲಿನ ಜಂಭುನಾಥ ರಸ್ತೆಯಲ್ಲಿರುವ ಸರ್ಕಾರಿ ಎಸ್ಟಿ ಮೆಟ್ರಿಕ್ ನಂತರದ ಹಾಸ್ಟೆಲ್‌ನಲ್ಲಿ ಒಟ್ಟು 148 ವಿದ್ಯಾರ್ಥಿನಿಯರಿದ್ದಾರೆ. ಪ್ರತಿ ಬುಧವಾರದಂತೆ ರಾತ್ರಿ ಚಿಕನ್ ಊಟ ನೀಡಿದ್ದು, 17 ಜನರು ಸಸ್ಯಹಾರ ಸೇವಿಸಿದ್ದರು. ಇನ್ನುಳಿದವರು ಮಾಂಸಾಹಾರ ಸೇವಿಸಿದ್ದರು.

ಮಾಂಸಾಹಾರ ಸೇವಿಸಿದವರಲ್ಲಿ ಕೆಲವರಿಗೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಬಳಿಕ ವಾಂತಿ- ಭೇದಿ ಶುರುವಾಗುತ್ತಿದ್ದಂತೆ ಇಲ್ಲಿನ ಹೊಸಪೇಟೆ ಉಪ ವಿಭಾಗ ಆಸ್ಪತ್ರೆಗೆ ಕರೆ ತರಲಾಗಿದ್ದು, ತೀವ್ರ ನೋವಿನಿಂದ ಬಳಲುತ್ತಿದ್ದ 30 ಜನರನ್ನು ಆಸ್ಪತ್ರೆಯ ಒಳ ರೋಗಿಗಳನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದಂತೆ 20 ಕ್ಕೂ ಹೆಚ್ಚು ಜನರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಹಾಸ್ಟೆಲ್‌ನಲ್ಲಿ ಹೆಲ್ತ್ ಕ್ಯಾಂಪ್

ಹಾಸ್ಟೆಲ್‌ನಲ್ಲಿರುವ 148 ವಿದ್ಯಾರ್ಥಿಗಳ ಪೈಕಿ ಬಹುತೇಕರಿಗೆ ಹೊಟ್ಟೆ ನೋವು, ವಾಂತಿ, ಭೇದಿ ಕಾಣಿಸಿಕೊಂಡಿದೆ. ಬಹುತೇಕ ನಿತ್ರಾಣಗೊಂಡು, ನಡೆಯುವುದಕ್ಕೂ ಕಷ್ಟವಾಗಿದ್ದರಿಂದ ಗಾಲಿ ಕುರ್ಚಿಯಲ್ಲಿ ವಾರ್ಡ್‌ಗೆ ಸಾಗಿಸುವುದು ಅನಿವಾರ್ಯವಾಯಿತು.

ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು, ಹಾಸ್ಟೆಲ್‌ನಲ್ಲಿ ಹೆಲ್ತ್‌ಕ್ಯಾಂಪ್ ಆರಂಭಿಸಿದ್ದಾರೆ. ವಸತಿ ನಿಲಯದಲ್ಲಿರುವ ಎಲ್ಲ ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ ನಡೆಸಿ, ಅನಾರೋಗ್ಯದ ಲಕ್ಷಣಗಳು ಇದ್ದವರಿಗೆ ಸ್ಥಳದಲ್ಲೇ ಚಿಕಿತ್ಸೆ ಒದಗಿಸಲಾಯಿತು. ಅದಕ್ಕಾಗಿ ಒಬ್ಬ ವೈದ್ಯ ಹಾಗೂ ಇಬ್ಬರು ಶುಶ್ರೂಷಕರನ್ನು ನಿಯೋಜಿಸಲಾಗಿದೆ.

ಆಸ್ಪತ್ರೆಗೆ ಸಚಿವ ಜಮೀರ್ ಭೇಟಿ

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಆಸ್ಪತ್ರೆಗೆ ಭೇಟಿ ನೀಡಿ, ವಿದ್ಯಾರ್ಥಿನಿಯರ ಆರೋಗ್ಯದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬಳಿಕ ತೀವ್ರ ಅಸ್ವಸ್ಥಗೊಂಡು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ಚಿಕನ್ ಸೇವನೆಯಂದಲೇ ಆರೋಗ್ಯ ಹದಗೆಟ್ಟಿದೆ ಎಂದು ಕೆಲ ವಿದ್ಯಾರ್ಥಿನಿಯರು ದೂರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ. ಆಸ್ಪತ್ರೆಯಲ್ಲಿ ತಜ್ಞವೈದ್ಯರು ಚಿಕಿತ್ಸೆ ನೀಡಲಿದ್ದು, ಸಂಜೆ ವೇಳೆಗೆ ಸಂಪೂರ್ಣ ಗುಣಮುಖರಾಗುತ್ತೀರಿ ಎಂದು ಧೈರ್ಯ ತುಂಬಿದರು. ಜಿಲ್ಲಾಧಿಕಾರಿ ದಿವಾಕರ್, ಜಿಪಂ ಸಿಇಒ ಸದಾಶಿವ, ಎಸ್ಪಿ ಶ್ರೀಹರಿಬಾಬು ಇತರರಿದ್ದರು.

ಫುಡ್ ಪಾಯ್ಸನ್‌ನಿಂದ 25ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ. ಸಂಜೆ ವೇಳೆಗೆ ಎಲ್ಲರೂ ಗುಣವಾಗಲಿದ್ದು, ನಾಳೆ ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಯವುದೇ ಅಪಾಯವಿಲ್ಲ. ಘಟನೆಗೆ ನಿಖರ ಕಾರಣ ತಿಳಿಯಲು ಆಹಾರ ಮತ್ತು ನೀರಿನ ಮಾದರಿಯನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸುವಂತೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.ಬಿ.ಜೆಡ್.ಜಮೀರ್ ಅಹ್ಮದ್ ಖಾನ್,ಜಿಲ್ಲಾ ಉಸ್ತುವಾರಿ ಸಚಿವ ವಾಂತಿ, ಭೇದಿ ಪ್ರಕರಣದಲ್ಲಿ ಒಟ್ಟು 34 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ಈ ಪೈಕಿ 29 ವಿದ್ಯಾರ್ಥಿನಿಯರು ನಗರದ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐವರು ವಿದ್ಯಾರ್ಥಿನಿಯರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇಡಲಾಗಿದೆ.ಡಾ.ಸಲೀಂ,ಡಿಎಚ್‌ಒ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net