More

    ಕಲುಷಿತ ನೀರು ಸೇವಿಸಿ ಇಬ್ಬರ ಸಾವು

    ಬೆಳಗಾವಿ/ ರಾಮದುರ್ಗ: ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ&ಭೇದಿಯಿಂದ ಇಬ್ಬರು ಮೃತಪಟ್ಟಿದ್ದು, 90ಕ್ಕೂ ಅಧಿಕ ಜನರು ಅಸ್ವಸ್ಥರಾಗಿದ್ದಾರೆ. ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿರುವ 40ಕ್ಕೂ ಅಧಿಕ ಅಸ್ವಸ್ಥರು ಸ್ಥಳಿಯ ಹಾಗೂ ಬಾಗಲಕೋಟೆ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮುದೇನೂರು ಗ್ರಾಮದ ಶಿವಪ್ಪ ಯಂಡಿಗೇರಿ (70), ಸರಸ್ವತಿ ನಿಂಗಪ್ಪ ಹಾವಳ್ಳಿ (70) ಮೃತರು. ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ವಾಂತಿ&ಭೇದಿಯಿಂದ ಜನತೆ ತಂಡೋಪ ತಂಡವಾಗಿ ಸ್ಥಳಿಯ ಸರ್ಕಾರಿ ಆಸ್ಪತ್ರೆ ಸೇರಿ ಪಟ್ಟಣದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಅಸ್ವಸ್ಥರ ಸಂಖ್ಯೆ 90ರ ಗಡಿ ದಾಟಿದೆ.

    ಗ್ರಾಮಳಲ್ಲಿನ ಮನೆಯ ನಳಗಳಿಗೆ ನೀರು ಪೂರೈಸುವ ಪೈಪ್​ಲೈನ್​ ಒಡೆದು ಚರಂಡಿಗಳ ನೀರು ಸೇರ್ಪಡೆಗೊಂಡಿದೆ. ಪರಿಣಾಮ ಕಲುಷಿತ ನೀರು ಕುಡಿದ ಗ್ರಾಮದ ಜನರಲ್ಲಿ ವಾಂತಿ, ಭೇದಿ ಉಲ್ಬಣಗೊಂಡಿದೆ. ಕೂಡಲೇ ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಬಾಗಲಕೋಟೆ ಜಿಲ್ಲೆಯ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಆದರೆ, ಸಮಸ್ಯೆ ಉಲ್ಬಣಗೊಂಡರೂ ಯಾರೊಬ್ಬರೂ ಸಹಾಯಕ್ಕೆ ಬರುತ್ತಿಲ್ಲ ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗ್ರಾಮಸ್ಥರು ಕುಡಿಯುವ ನೀರು ಪೂರೈಕೆ ಮಾಡುವ ಪೈಪ್​ಲೈನ್​ ಮಾರ್ಗಗಳು ಅಲ್ಲಲ್ಲಿ ಹೊಡೆದು ಚರಂಡಿ ನೀರು ಸೇರ್ಪಡೆಯಾಗುತ್ತಿದೆ. ಅಲ್ಲದೆ ತಿಪ್ಪೆ ಗುಂಡಿ ಪಕ್ಕದಲ್ಲಿದ್ದ ಬೋರ್​ವೆಲ್​ ನೀರಿನೊಂದಿಗೆ ಕಲುಷಿತ ನೀರು ಮಿಶ್ರಣವಾಗಿದೆ. ಈ ನೀರನ್ನು ಸೇವಿಸಿದ ಗ್ರಾಮದ ಬಸವಣ್ಣ ದೇವರ ಗುಡಿ ಓಣಿ, ಲಕ್ಕಮ್ಮದೇವಿ ಗುಡಿ ಓಣಿ, ಬೀರದೇವರ ಗುಡಿ ಓಣಿಯ 44 ಪುರುಷರು, 30 ಮಹಿಳೆಯರು, 12 ಬಾಲಕರು, 8 ಬಾಲಕಿಯರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಿಗೆ ಬಟಕುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರ, ರಾಮದುರ್ಗ ತಾಲೂಕು ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರನ್ನು ಬೆಳಗಾವಿ ಹಾಗೂ ಬಾಗಲಕೋಟೆ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. 8 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

    ಸಾಂತ್ವನ: ಕಲುಷಿತ ನೀರು ಕುಡಿದು ಮೃತಪಟ್ಟ ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮದ ಶಿವಪ್ಪ ಬಸಪ್ಪ ಯಂಡಿಗೇರಿ, ಸರಸ್ವತಿ ನಿಂಗಪ್ಪ ಹಾವಳ್ಳಿ ಅವರ ಮನೆಗಳಿಗೆ ಬಿಜೆಪಿ ಮುಖಂಡ ಪಿ.ಎಫ್​. ಪಾಟೀಲ ಗುರುವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಜಿಪಂ ಸದಸ್ಯ ರೇಣಪ್ಪ ಸೋಮಗೊಂಡ, ಬಸಲಿಂಗಪ್ಪ ಹರಗುಟಗಿ, ಭೀಮಪ್ಪ ಬಸಿಡೋಣಿ, ಗೋವಿಂದರಡ್ಡಿ ಪೆಟ್ಲೂರ, ಗೌಡಪ್ಪಗೌಡ ಪಾಟೀಲ, ಹನುಮಂತ ಅಂಗಡಿ, ಡಾ. ಬಿ.ಎನ್​. ಮಾದನ್ನವರ, ಗಣಪತಿ ಬಸಿಡೋಣಿ, ಇಮಾಮಸಾಬ ಮುಜಾವರ ಇತರರಿದ್ದರು.

    ಮೃತರ ಕುಟುಂಬಕ್ಕೆ 10 ಲಕ್ಷ ರೂ.: ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ&ಭೇದಿಯಿಂದ ಇಬ್ಬರು ಮೃತಪಟ್ಟಿರುವ ಕುಟುಂಬದ ಸದಸ್ಯರಿಗೆ 10 ಲಕ್ಷ ರೂ. ಪರಿಹಾರ ನೀಡಲಾಗುವುದು. ಕುಡಿಯುವ ನೀರಿನ ಪೈಪ್​ಲೈನ್​ಗೆ ಕಲುಷಿತ ನೀರು ಹೇಗೆ ಪೂರೈಕೆಯಾಗಿದೆ ಎಂಬುದರ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ಮತ್ತು ಅಸ್ವಸ್ಥರಾಗಿರುವವರಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸುವಂತೆ ಜಿಪಂ ಸಿಇಒಗೆ, ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts