ಚಾಮುಂಡೇಶ್ವರಿಗೆ ಎಚ್‌ಡಿಕೆ ವಿಶೇಷ ಪೂಜೆ

CPT HDDDD
Published on

ರಾಮನಗರ : ನಗರದ ಚಾಮುಂಡೇಶ್ವರಿ ದೇವಾಲಯಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಶನಿವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದರು.

ಬೆಂಗಳೂರಿನಿಂದ ಮಧ್ಯಾಹ್ನದ ವೇಳೆಗೆ ಆಗಮಿಸಿದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕಾಯಿಸೊಪ್ಪಿನಬೀದಿ ಅರಳೀಮರ ಸರ್ಕಲ್‌ನಿಂದ ಜಾನಪದ ಕಲಾಮೇಳದೊಂದಿಗೆ ಜೈಕಾರ ಹಾಕುತ್ತಾ ಜೆಡಿಎಸ್, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಚಾಮುಂಡೇಶ್ವರಿ ದೇಗುಲದವರೆಗೆ ಮೆರವಣಿಗೆಯಲ್ಲಿ ಕರೆತಂದರು. ದೇವಾಲಯದ ಆವರಣದಲ್ಲಿ ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಲಾಯಿತು. ಇದೇ ವೇಳೆ ಮಹಿಳೆಯರು ಆರತಿ ಬೆಳಗಿ ತಿಲಕವಿಟ್ಟು ಸ್ವಾಗತಿಸಿದರು. ನಂತರ ದೇವಾಲಯದಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜತೆ ಪೂಜೆಯಲ್ಲಿ ಪಾಲ್ಗೊಂಡರು. ದೇವಾಲಯದಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಹೂವಿನಹಾರ, ಶಾಲು ಹಾಕಿ ಸನ್ಮಾನಿಸಿದರು.

ಮುಗಿಬಿದ್ದ ಜನರು : ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಆಗಮಿಸಿದ ಎಚ್.ಡಿ. ಕುಮಾರಸ್ವಾಮಿ ಅವರನ್ನು ನೋಡಲು, ಶುಭಕೋರಲು ಅಭಿಮಾನಿಗಳು ದೇವಾಲಯದ ಆವರಣದಲ್ಲಿ ಮುಗಿಬಿದ್ದರು. ನಾಮುಂದು ತಾಮುಂದು ಎಂದು ಹಾರ ಹಾಕಲು ಮುಗಿಬಿದ್ದರು. ಆತುರಾತುರವಾಗಿಯೇ ಕೆಲವರು ನೂಕು ನುಗ್ಗಲಿನಲ್ಲಿ ಹಾರ ಹಾಕಿ ಹಸ್ತಲಾಘವ ನೀಡಿ ನಾಯಕನನ್ನು ನೋಡಿ ಖುಷಿಪಟ್ಟರು.

ಶಕ್ತಿ ದೇವತೆ : ಕುಮಾರಸ್ವಾಮಿ ಮತ್ತು ಅವರ ಕುಟುಂಬ ಯಾವುದೇ ಕೆಲಸ ಆರಂಭಿಸುವ ಮುನ್ನ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಅದರಂತೆ ನೂತನವಾಗಿ ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಪ್ರಥಮ ಬಾರಿಗೆ ರಾಮನಗರ ಜಿಲ್ಲೆಗೆ ಆಗಮಿಸಿದ ವೇಳೆಯಲ್ಲಿ ಶಕ್ತಿ ದೇವತೆಗೆ ಪೂಜೆ ಸಲ್ಲಿಸಿ ನಂತರ ಚನ್ನಪಟ್ಟಣದತ್ತ ಸಾಗಿದರು.

ಮನವಿ : ರಾಮನಗರದಲ್ಲಿ ಸರ್ಕಾರಿ ರೇಷ್ಮೆ ಫಿಲೇಚಾರ್, ರೇಷ್ಮೆ ನೂಲು ಬಿಚ್ಚಾಣಿಕೆ, ವಸ್ತ್ರ ತಯಾರಿಕೆ ಫಿಲೇಚರ್ ಕಾರ್ಖಾನೆ ರಾಮನಗರದಲ್ಲಿ ಪ್ರಾರಂಭಿಸಬೇಕು. ಫಿಲೇಚರ್ ಕಾರ್ಮಿಕರು ತೀರ ಸಂಕಷ್ಟದಲ್ಲಿದ್ದು, ಇವರ ನೆರವಿಗೆ ಧಾವಿಸಿ ಉತ್ತಮ ಉದ್ಯೋಗ ಮತ್ತು ಕಾರ್ಮಿಕರಿಗೆ ನಿವೇಶನ ನೀಡಬೇಕೆಂದು ವಕೀಲ ವಿನೋದ್‌ಭಗತ್, ಮುಖಂಡರಾದ ಲೊಕೇಶ್, ಜಯಕುಮಾರ್, ಕೆಂಪರಾಜು ಸೇರಿ ಹಲವರು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದರು.

ಬಿಜೆಪಿ ಜೆಡಿಎಸ್ ಮುಖಂಡರಾದ ಡಿ. ಗಿರೀಗೌಡ, ಶಿವಲಿಂಗಯ್ಯ, ನರಸಿಂಹಮೂರ್ತಿ, ಪಿ. ಅಶ್ವತ್ಥ್, ದೊರೆಸ್ವಾಮಿ, ಗೂಳಿಗೌಡ, ಚಂದ್ರಯ್ಯ, ಪಾಂಡುರಂಗ, ಕಂಟ್ರಾಕ್ಟರ್ ಪ್ರಕಾಶ್, ದರ್ಶನ್‌ರೆಡ್ಡಿ, ರಾಮಕೃಷ್ಣಯ್ಯ, ಜಿ.ಪಿ. ಗಿರೀಶ್, ಮಂಜುನಾಥ್, ಲಕ್ಷ್ಮೀಕಾಂತ್, ಜಿ.ಟಿ. ಕೃಷ್ಣ, ಕಾಳಯ್ಯ, ನಂದೀಶ್‌ಗೌಡ, ದೇವರಾಜು, ಜಯಕುಮಾರ್, ಶೋಭಾ, ಕೆಂಪರಾಜು, ರಮೇಶ್, ನಾಗೇಶ್, ರಘವೇಂದ್ರ, ಗ್ಯಾಬ್ರಿಲ್, ಸರಸ್ವತಿ, ವೆಂಕಟೇಶ್, ಅಪ್ಪಾಜಣ್ಣ, ಚಿತ್ರ, ಯೋಗೇಶ್, ಉಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net