ಚಳಗೇರಿ ನವಗ್ರಾಮದ ಫಲಾನುಭವಿಗಳಿಗೆ ನೋಟಿಸ್

16-RNR-01
Published on

ರಾಣೆಬೆನ್ನೂರ: ತಾಲೂಕಿನ ಚಳಗೇರಿ ಗ್ರಾಪಂ ವ್ಯಾಪ್ತಿಯ ನವಗ್ರಾಮಕ್ಕೆ ತೆರಳದ ಆಶ್ರಯ ಯೋಜನೆ ಫಲಾನುಭವಿಗಳಿಗೆ ಗ್ರಾಪಂ ಪಿಡಿಒ ವೆಂಕಟೇಶ ಉಕ್ಕಡಗಾತ್ರಿ ನೋಟಿಸ್ ಜಾರಿ ಮಾಡಿದ್ದಾರೆ.

ಸರ್ಕಾರ ನವಗ್ರಾಮದಲ್ಲಿ ನಿವೇಶನ ನೀಡಿ, ಆಶ್ರಯ ಯೋಜನೆಯಡಿ ಮನೆ ನಿರ್ವಿುಸಿಕೊಟ್ಟಿದೆ. ಆದರೆ, ಫಲಾನುಭವಿಗಳು ಅಲ್ಲಿಯ ಮನೆಗಳನ್ನು ಬಿಟ್ಟು ಗ್ರಾಮದ ಮನೆಗಳಲ್ಲಿ ವಾಸವಾಗಿದ್ದಾರೆ. ಇವರೆಲ್ಲರೂ ನೋಟಿಸ್ ತಲುಪಿದ 10 ದಿನದೊಳಗೆ ತಮ್ಮ ತಮ್ಮ ಆಶ್ರಯ ಮನೆಗಳಲ್ಲಿ ಬಂದು ವಾಸ ಮಾಡಬೇಕು. ಇಲ್ಲವಾದರೆ ಖಾಲಿ ಬಿದ್ದಿರುವ ಮನೆಗಳನ್ನು ಗ್ರಾಪಂ ವಶಕ್ಕೆ ಪಡೆದು, ನಿರ್ಗತಿಕರಿಗೆ ವಿತರಿಸಲಾಗುವುದು ಎಂದು ನೋಟಿಸ್​ನಲ್ಲಿ ಎಚ್ಚರಿಸಿದ್ದಾರೆ.

38 ಕುಟಂಬಗಳಿಗೆ ನೋಟಿಸ್: 2001-02ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಚಳಗೇರಿ ಗ್ರಾಪಂ ವ್ಯಾಪ್ತಿಯ ಸರ್ವೆ ನಂ. 353ರಲ್ಲಿ ನವಗ್ರಾಮ ನಿರ್ವಿುಸಿ, 267 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಿದೆ. ಅದರಲ್ಲಿ 38 ಕುಟುಂಬಗಳಿಗೆ ಈಗಾಗಲೇ ವಿವಿಧ ಯೋಜನೆಯಡಿ ಆಶ್ರಯ ಮನೆ ನಿರ್ವಿುಸಿಕೊಟ್ಟಿತ್ತು. ಆದರೆ, ಈ 38 ಕುಟುಂಬಸ್ಥರು ಆಶ್ರಯ ಮನೆಯಲ್ಲಿ ವಾಸ ಮಾಡದೇ ಗ್ರಾಮದಲ್ಲಿರುವ ತಮ್ಮ ಮೂಲ ಮನೆಗಳಲ್ಲಿ ವಾಸ ಮಾಡುತ್ತಿದ್ದರು.

ಈ ಕುರಿತು ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದ ಹಿನ್ನೆಲೆಯಲ್ಲಿ ಗ್ರಾಪಂ ಪಿಡಿಒ ವೆಂಕಟೇಶ ಉಕ್ಕಡಗಾತ್ರಿ, ಗ್ರಾಮದಲ್ಲಿ ವಾಸವಿರುವ 38 ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ನೋಟಿಸ್ ಜಾರಿ ಮಾಡಿದ್ದಾರೆ. ಇದಕ್ಕೆ ಫಲಾನುಭವಿಗಳು ಸ್ಪಂದಿಸದಿದ್ದರೆ, ಮನೆಗಳನ್ನು ವಾಪಸ್ ಗ್ರಾಪಂ ವ್ಯಾಪ್ತಿಗೆ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಚಳಗೇರಿ ನವಗ್ರಾಮದಲ್ಲಿ ವಾಸವಿರದ 38 ಕುಟುಂಬಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿದ್ದೇವೆ. ವಾಪಸ್ ಬರಲು 10 ದಿನ ಕಾಲಾವಕಾಶ ನೀಡಿದ್ದೇವೆ. ಅವರು ಬರದಿದ್ದರೆ ಆಶ್ರಯ ಮನೆಗಳನ್ನು ಗ್ರಾಪಂ ವಶಕ್ಕೆ ತೆಗೆದುಕೊಂಡು ಗ್ರಾಮ ಸಭೆ ನಡೆಸುವ ಮೂಲಕ ಅರ್ಹರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. -ವೆಂಕಟೇಶ ಉಕ್ಕಡಗಾತ್ರಿ, ಚಳಗೇರಿ ಗ್ರಾಪಂ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net