

ಕೆ.ಎಂ.ದೊಡ್ಡಿ: ಸರ್ಕಾರ ಆಯೋಜಿಸಿರುವ ಚಲನಚಿತ್ರೋತ್ಸವಕ್ಕೆ ಸಿನಿಮಾ ರಂಗಕ್ಕೆ ಸಂಬಂಧಪಟ್ಟ ನಟರು ಭಾಗವಹಿಸದೆ ಅವರ ಕರ್ತವ್ಯ ಮರೆತಿರುವುದು ನಿಜಕ್ಕೂ ಶೋಭೆಯಲ್ಲ ಎಂದು ಶಾಸಕ ಕದಲೂರು ಉದಯ್ ಕಿಡಿಕಾರಿದರು.
ಸಮೀಪದ ಮಡೇನಹಳ್ಳಿ ಗ್ರಾಮದಲ್ಲಿ 10 ಲಕ್ಷ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ಸರ್ಕಾರ ಚಿತ್ರರಂಗಕ್ಕೆ ಎಲ್ಲ ರೀತಿಯ ಸಲವತ್ತುಗಳನ್ನು ನೀಡುತ್ತಿದೆ. ಇದರೊಂದಿಗೆ ಚಲನಚಿತ್ರೋತ್ಸವವನ್ನು ಆಯೋಜನೆ ಮಾಡಲಾಗಿದ್ದು ಕನ್ನಡ ಚಿತ್ರರಂಗ ಅಭಿವೃದ್ಧಿ ಹೊಂದಲಿ ಎಂಬ ಆಶಯ ಸರ್ಕಾರದ್ದಾಗಿದ್ದರೆ ನಟರಲ್ಲಿ ಇಚ್ಛಾಸಕ್ತಿ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಚಿತ್ರೋತ್ಸವಕ್ಕೆ ಆಹ್ವಾನವಿದ್ದರೂ ಭಾಗವಹಿಸದಿರುವುದು ನಿಜಕ್ಕೂ ಕನ್ನಡ ಚಿತ್ರ ರಂಗ ತಲೆ ತಗ್ಗಿಸುವಂತ ವಿಚಾರವಾಗಿದೆ. ಚಿತ್ರರಂಗ ಬೆಳೆಸಬೇಕೆಂಬ ಉದ್ದೇಶದಿಂದ ಚಲನಚಿತ್ರೋತ್ಸವ ಆಯೋಜಿಸಲಾಗಿದೆ. ಎಲ್ಲರನ್ನು ಆಹ್ವಾನಿಸಲು ಯಾರದೋ ಮದುವೆ ಮಾಡುತ್ತಿಲ್ಲ. ಚಿತ್ರರಂಗದವರೇ ಬರಲ್ಲ ಎಂದರೆ ಕನ್ನಡ ಚಿತ್ರರಂಗವನ್ನು ಯಾರು ಬೆಳೆಸುತ್ತಾರೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದು, ಬಿಜೆಪಿ ಸೇರುವ ಅನಿವಾರ್ಯತೆ ಬಂದಿಲ್ಲ. ಗಾಳಿ ಸುದ್ದಿಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ಹೆಚ್ಚಿಸಿರುವ ಡಿ.ಕೆ.ಶಿವಕುಮಾರ್ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದು ಅದನ್ನು ಸಹಿಸದೆ ಅಪಪ್ರಚಾರಕ್ಕೆ ಇಳಿದಿದ್ದಾರೆ ಎಂದರು.
ಮದ್ದೂರು ಕ್ಷೇತ್ರಕ್ಕೆ ನೀರಾವರಿ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕೊಡುಗೆಗಳನ್ನು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದು, ಸಕಾರತ್ಮವಾಗಿ ಸ್ಪಂದಿಸಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯ ಎ.ಎಸ್.ರಾಜೀವ್, ಮುಖಂಡರಾದ ಸಿದ್ದಲಿಂಗ ಪ್ರಸಾದ್ ಒಡೆಯರ್, ಜಗದೀಶ್ ಮೂರ್ತಿ, ಮಹೇಶ್, ಶಿವಕುಮಾರ್, ಶ್ರೀನಿವಾಸ್ ಮೂರ್ತಿ, ವೀರೇಂದ್ರ, ರೇಣುಪ್ರಸಾದ್, ಗಿರೀಶ್ ಮತ್ತಿತರಿದ್ದರು.