ಚನ್ನರಾಯಪಟ್ಟಣ ಭೂಸ್ವಾಧೀನಕ್ಕೆ ವಿರೋಧಿಸಿ

Published on

ಬೆಂಗಳೂರಿನ ಫ್ರೀಡ್‌ಂ ಪಾರ್ಕ್‌ನಲ್ಲಿ ಇಂದು ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ಕೈಗಾರಿಕಾ ಉದ್ದೇಶಕ್ಕೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 19 ಹಳ್ಳಿಗಳ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಹಲವು ರೈತ ಸಂಘಟನೆಗಳ ಸಹಯೋಗದಲ್ಲಿ ಜು.3ರಂದು ಬೆಂಗಳೂರಿನ ಫ್ರೀಡ್‌ಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಗೌರಿಬಿದನೂರು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತ ಹೋರಾಟಗಾರರು ಪಾಲ್ಗೊಳ್ಳಬೇಕು ಎಂದು ಭೂಮಿ ಮತ್ತು ವಸತಿ ಹೋರಾಟ ಸಮಿತಿ ರಾಜ್ಯ ಖಜಾಂಚಿ ಆರ್.ಶ್ರೀರಂಗಾಚಾರಿ ತಿಳಿಸಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

ಈ ಹಿಂದೆ ಭೂರಹಿತ ರೈತರಿಗೆ ಸರ್ಕಾರ ಬಗರ್ ಹುಕುಂ ಯೋಜನೆಯಡಿ ಭೂಮಿ ನೀಡಿ ಬದುಕನ್ನು ಕಟ್ಟಿಕೊಟ್ಟಿತ್ತು. ಆದರೆ ಈ ಹಿಂದೆ ಬಿಜೆಪಿ ಸರ್ಕಾರ ಕೆಐಎಡಿಬಿ ವಶಕ್ಕೆ ಪಡೆದುಕೊಳ್ಳಲು ರೈತರಿಗೆ ನೋಟಿಸ್ ಜಾರಿ ಮಾಡಿತ್ತು. ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಇದು ರೈತ ವಿರೋಧಿ ನೀತಿ ಎಂದು ಹೇಳಿದ್ದರು. ಈಗ ಅದೇ ಸಿದ್ದರಾಮಯ್ಯನವರ ಸರ್ಕಾರವೇ 2013ರ ಭೂ ಸುಧಾರಣೆ ಕಾಯ್ದೆಯನ್ನು ಗಾಳಿಗೆ ತೂರಿ, ಮತ್ತೆ ರೈತರಿಗೆ ನೋಟಿಸ್ ಜಾರಿ ಮಾಡಿದ್ದು, ವಿಪರ್ಯಾಸ. ಭೂಸ್ವಾಧೀನ ವಿರೋಧಿಸಿ ಈಗಾಗಲೇ ಹಗಲು ರಾತ್ರಿ ಧರಣಿ ನಡೆಸಲಾಗುತ್ತಿದೆ. ರೈತ ಸಂಘ ಸೇರಿ ಹಲವಾರು ಸಂಘ-ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದರು.

ಎದ್ದೇಳು ಕರ್ನಾಟಕ ಸಂಘಟನೆ ಸಂಚಾಲಕ ಇಡಗೂರು ಸೋಮಯ್ಯ ಮಾತನಾಡಿ, ರೈತರಿಗೆ ಭೂಮಿಯನ್ನು ನೀಡಿದಂತೆ ನೀಡಿ ಮತ್ತೆ ಅದನ್ನು ಕಸಿದುಕೊಳ್ಳುವ ಹುನ್ನಾರವನ್ನು ಸರ್ಕಾರ ಮಾಡುತ್ತಿರುವುದು ಸರಿಯಲ್ಲ. ಈ ಬಗ್ಗೆ ದಲಿತ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳಿಂದ ಜು.3ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ದಸಂಸ ತಾಲೂಕು ಸಂಚಾಲಕ ಪಿ.ನರಸಿಂಹಮೂರ್ತಿ, ಎನ್.ನಾರಾಯಣಸ್ವಾಮಿ, ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕ ಜಿ.ಶಾಮೀರ್, ಲಕ್ಷ್ಮೀನಾರಾಯಣ, ರಾಮಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net