ಚನ್ನರಾಯಪಟ್ಟಣ ಪುರಸಭೆ ಅಧ್ಯಕ್ಷ ಬನಶಂಕರಿ ರಘು

Oplus_131072
Oplus_131072
Published on

ಚನ್ನರಾಯಪಟ್ಟಣ: ಇಲ್ಲಿನ ಪುರಸಭೆಗೆ ಗುರುವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರಾದ ಬನಶಂಕರಿ ರಘು ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ರಾಣಿ ಕೃಷ್ಣ ಅವಿರೋಧವಾಗಿ ಆಯ್ಕೆಯಾದರು.


ಚನ್ನರಾಯಪಟ್ಟಣ ಪುರಸಭೆಯ ಎರಡನೇ ಅವಧಿಗೆ ಸರ್ಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿದನ್ವಯ ಪೌರಾಡಳಿತದ ಸೂಚನೆ ಮೇರೆಗೆ ಗುರುವಾರ ಚುನಾವಣೆ ನಿಗದಿಯಾಗಿತ್ತು. 2ನೇ ಅವಧಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೂ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. 23 ಸದಸ್ಯ ಸ್ಥಾನ ಇರುವ ಪುರಸಭೆಯಲ್ಲಿ ಜೆಡಿಎಸ್ 16 ಸ್ಥಾನಗಳನ್ನು ಹೊಂದಿ ಸ್ಪಷ್ಟ ಬಹುಮತ ಹೊಂದಿದ್ದ ಹಿನ್ನೆಲೆಯಲ್ಲಿ ವಾರ್ಡ್ ನಂ.4 ರಲ್ಲಿನ ಜೆಡಿಎಸ್ ಸದಸ್ಯೆ ಕೆ.ಎನ್.ಬನಶಂಕರಿ ರಘು ಅಧ್ಯಕ್ಷ ಸ್ಥಾನಕ್ಕೂ ಮತ್ತು ವಾರ್ಡ್ ನಂ.15ರಲ್ಲಿನ ಜೆಡಿಎಸ್ ಸದಸ್ಯೆ ಎಚ್.ಸಿ.ರಾಣಿಕೃಷ್ಣ ನಾಮಪತ್ರ ಸಲ್ಲಿಸಿದ್ದರು.


ಇವರಿಬ್ಬರನ್ನು ಹೊರತುಪಡಿಸಿ ಮತ್ತ್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ವಿ.ಎಸ್.ನವೀನ್‌ಕುಮಾರ್ ಅಧ್ಯಕ್ಷರಾಗಿ ಕೆ.ಎನ್.ಬನಶಂಕರಿ ರಘು ಮತ್ತು ಉಪಾಧ್ಯಕ್ಷರಾಗಿ ಎಚ್.ಸಿ.ರಾಣಿಕೃಷ್ಣ ಅವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಣೆ ಮಾಡಿದರು.


ಚುನಾವಣೆ ವೇಳೆ ಹಾಜರಿದ್ದ ಶಾಸಕ ಸಿ.ಎನ್.ಬಾಲಕೃಷ್ಣ ಅವರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಪಟ್ಟಣದಲ್ಲಿ ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಎಲ್ಲ ಸದಸ್ಯರ ವಿಶ್ವಾಸದೊಂದಿಗೆ ಮುಂದಾಗಬೇಕು. ಚನ್ನರಾಯಪಟ್ಟಣ ಎಲ್ಲ ರಂಗದಲ್ಲಿಯೂ ಅತಿವೇಗವಾಗಿ ಬೆಳೆಯುತ್ತಿದ್ದು, ಸರ್ಕಾರದ ಅನುದಾನ ಸೇರಿ ಪುರಸಭಾ ಅನುದಾನದಲ್ಲಿ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದು, 3.25 ಕೋಟಿ ರೂ. ವೆಚ್ಚದಲ್ಲಿ ನೂತನ ಪುರಭವನ ನಿರ್ಮಾಣವಾಗುತ್ತಿದ್ದು, ಮೊದಲ ಅಂತಸ್ತಿನ ಕಟ್ಟಡ ಪೂರ್ಣವಾಗಿದ್ದು, ಮುಂದಿನ 15 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಪಿಎಲ್‌ಡಿ ಬ್ಯಾಂಕ್ ಪಕ್ಕದಲ್ಲಿನ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು, ಪುರಸಭೆ ಬಾಡಿಗೆ ಹಣ 5 ಕೋಟಿ ರೂ.ಇದ್ದು, ಇದರೊಂದಿಗೆ ಕೆಯುಡಿಸಿಸಿ ಸಂಸ್ಥೆಯಲ್ಲಿ ಸಾಲ ಪಡೆದು ಉನ್ನತ ಸಂಕೀರ್ಣ ಮಾಡುವ ಜವಾಬ್ದಾರಿ ನೂತನ ಅಧ್ಯಕ್ಷೆ, ಉಪಾಧ್ಯಕ್ಷರ ಹೊಣೆಯಾಗಿದೆ ಎಂದರು.


ನೂತನ ಅಧ್ಯಕ್ಷೆ ಬನಶಂಕರಿ ರಘು ಮಾತನಾಡಿ, ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಸಹಕರಿಸಿದ ಶಾಸಕ ಸಿ.ಎನ್.ಬಾಲಕೃಷ್ಣ, ಎಲ್ಲ ಸದಸ್ಯರು, ಮಾಜಿ ಪ್ರಧಾನಿ ದೇವೇಗೌಡರ ಆಶೀರ್ವಾದದಿಂದ ನನ್ನ ಆಯ್ಕೆಗೆ ಅರ್ಥ ಬರುವ ರೀತಿ ಕೆಲಸ ಮಾಡಲಿದ್ದೇನೆ. ಕುಡಿಯುವ ನೀರು, ಸ್ವಚ್ಛತೆ, ಚರಂಡಿ ಸೇರಿದಂತೆ ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡಿ ಕೆಲಸ ಮಾಡುವುದಾಗಿ ತಿಳಿಸಿದರು.


ಉಪಾಧ್ಯಕ್ಷ ರಾಣಿಕೃಷ್ಣ ಮಾತನಾಡಿ, ನನನ್ನ ಪದವಿಗೆ ಎಳ್ಳಷ್ಟು ಚ್ಯುತಿ ಬಾರದಂತೆ ನಡೆದುಕೊಂಡು ಎಲ್ಲ ಸದಸ್ಯರ ಪ್ರೀತಿ, ವಿಶ್ವಾಸದೊಂದಿಗೆ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.


ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರಾದ ಸಿ.ಎನ್.ಶಶಿಧರ್, ಎಚ್.ಎನ್.ನವೀನ್‌ಕುಮಾರ್, ಜಿ.ಆರ್.ಸುರೇಶ್, ರೇಖಾ ಅನಿಲ್, ಲಕ್ಷ್ಮೀ ವೆಂಕಟೇಶ್, ಕವಿತಾ ರಾಜು, ಸಿ.ಎನ್.ಮೋಹನ್, ರಾಮಕೃಷ್ಣ, ಯೋಗೇಶ್, ಮಹೇಶ್, ಪರ್ಹನರಿಜ್, ಧರಣೇಶ್, ಇಲಿಯಾಸ್, ರಾಧಾ ಮಂಜುನಾಥ್, ಸಿ.ಆರ್.ಸುರೇಶ್, ಎಸ್.ಎ.ಗಣೇಶ್ ಮತ್ತು ಸಿ.ಎಸ್.ಪ್ರಕಾಶ್, ಪುರಸಭೆಯ ಮುಖ್ಯಾಧಿಕಾರಿ ಹೇಮಂತ್‌ಕುಮಾರ್ ಮತ್ತಿತರರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net