

ಚನ್ನಪಟ್ಟಣ : ಇಂದು ಧ್ವಜಾರೋಹಣ ಮಾಡುವ ದಿನ ಮಾತ್ರವಲ್ಲ, ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿ ಆರೋಹಣ ಎಂದು ಉಪಮುಖ್ಯಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಗರದ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇಂದು ನನ್ನ ರಾಜಕೀಯ ಬದುಕಿನ ಮಹತ್ವದ ದಿನ. 78ನೇ ಸ್ವಾತಂತ್ರ್ಯೋತ್ಸವದ ಶುಭಕೋರಲು ಇಲ್ಲಿಗೆ ಬಂದಿದ್ದೇನೆ. ನಾವು ಬೆಂಗಳೂರು ಜಿಲ್ಲೆಯವರು, ಈಗಾಗಲೇ ಬೆಂಗಳೂರು ದಕ್ಷಿಣ ಎಂಬ ಹೆಸರು ಬದಲಾವಣೆ ಆಗಿದೆ. ನಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸ ಆಗುತ್ತಿದೆ. ಸರ್ಕಾರದ ಪ್ರತಿನಿಧಿಯಾಗಿ ಬಂದು ಇಲ್ಲಿ ಧ್ವಜಾರೋಹಣ ಮಾಡುತ್ತಿದ್ದೇನೆ ಎಂದರು.
ಸ್ವಾತಂತ್ರ್ಯೋತ್ಸವ ಎಂಬುದು ಇತಿಹಾಸ ತಿಳಿಸುವ ಪವಿತ್ರವಾದ ದಿನ. ರಾಷ್ಟ್ರಗೀತೆ ಹೇಳಿ, ಧ್ವಜಾರೋಹಣ ಮಾಡಿದರೆ ಸಾಲದು. ದೇಶದ ಸ್ವಾತಂತ್ರ್ಯದ ಇತಿಹಾಸ, ತ್ಯಾಗ ಹಾಗೂ ಬಲಿದಾನಗಳ ಬಗ್ಗೆ ಯುವ ಸಮುದಾಯಕ್ಕೆ ತಿಳಿಸಬೇಕು. ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್ ಎಂಬುದು ನಮ್ಮ ಹೆಮ್ಮೆ. ತಾಲೂಕಿನಲ್ಲಿ ಧ್ವಜಾರೋಹಣ ಮಾಡುವ ಅವಕಾಶ ಸಿಕ್ಕಿರುವುದು ನನಗೆ ಹೆಮ್ಮೆ ಎನಿಸುತ್ತಿದೆ. 35 ವರ್ಷದಿಂದ ರಾಮನಗರ, ಕನಕಪುರದಲ್ಲಿ ಮಾಡುತ್ತಿದ್ದೇನೆ ಎಂದರು.
ಎಚ್‌ಡಿಕೆಗೆ ಟಾಂಗ್! ಧ್ವಜವನ್ನು ಅರ್ಧಕ್ಕೆ ಹಾರಿಸಿದರೆ ಅದು ಅಗೌರವ, ಹಾಗೆಯೇ ಜನರನ್ನು ಅರ್ಧಕ್ಕೆ ಬಿಟ್ಟು ಹೋಗೋದು ಅಗೌರವ ಎನ್ನುವ ಮೂಲಕ ಭಾಷಣದಲ್ಲಿ ಪರೋಕ್ಷವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಟಾಂಗ್ ನೀಡಿದ ಶಿವಕುಮಾರ್, ನಾನು ನಿಮ್ಮನ್ನು ಬಿಟ್ಟುಹೋಗುವ ಪ್ರಶ್ನೆಯೇ ಇಲ್ಲ. ನಾನು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ, ಕ್ಷೇತ್ರದ ಅಭಿವೃದ್ಧಿ ಮಾಡಲು ಬಂದಿದ್ದೇನೆ. ಈಗಾಗಲೇ ಕ್ಷೇತ್ರದ ಜನರಿಗೆ ನಿವೇಶನ ಕೊಡಲು ಜಾಗ ಗುರುತು ಮಾಡಿದ್ದೇವೆ. ಚನ್ನಪಟ್ಟಣದ ಸಂಪೂರ್ಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಸ್ವಾತಂತ್ರ್ಯ ಎಂದರೆ ಗುಲಾಮಗಿರಿ ಮುಕ್ತ. ಪ್ರತಿನಿಧಿ ಇಲ್ಲದ ಕಾರಣ ನಾನು ಇಲ್ಲಿಗೆ ಬಂದಿದ್ದೇ, ನಿಮ್ಮ ಜತೆ ನಾನಿರುತ್ತೇನೆ ಎಂದು ಪುನರುಚ್ಚರಿಸಿದರು.
150 ಕೋಟಿ ರೂ. ವಿಶೇಷ ಅನುದಾನ : ಈ ಹಿಂದೆ ಇದ್ದ ಶಾಸಕರು ಈ ಪವಿತ್ರ ಕಾರ್ಯಕ್ರಮಕ್ಕೆ ಬಂದಿದ್ದರೋ ಬಂದಿಲ್ಲವೋ ಎಂಬುದನ್ನು ಚರ್ಚೆ ಮಾಡಲ್ಲ. ನಾನು ನಿಮ್ಮ ಮನೆ ಮಗನಾಗಿ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಭವಿಷ್ಯ ಉಜ್ವಲವಾಗಲಿದೆ. ಅಭಿವೃದ್ಧಿ ಎಂದರೆ ಏನೆಂದು ತೋರಿಸುತ್ತೇವೆ. ಜಿಲ್ಲೆಯ ಜನರ ಬದುಕು ಬದಲಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು. ಮುಖ್ಯಮಂತ್ರಿಗಳು ತಾಲೂಕಿಗೆ 150 ಕೋಟಿ ರೂ. ವಿಶೇಷ ಅನುದಾನ ನೀಡಲು ಒಪ್ಪಿದ್ದಾರೆ. ಜನಸ್ಪಂದನ ಸಭೆ ಸ್ವೀಕೃತವಾಗಿರುವ 22 ಸಾವಿರ ಅರ್ಜಿ ವಿಲೇವಾರಿಗೆ ಕ್ರಮಕೈಗೊಂಡಿದ್ದೇವೆ. ಗರಕಹಳ್ಳಿ ಏತ ನೀರಾವರಿ ಯೋಜನೆ ಪುನಶ್ಚೇತನ, ಸಣ್ಣ ನೀರಾವರಿ ಯೋಜನೆಗಳು, ಸತ್ತೇಗಾಲ ಯೋಜನೆ ಪೂರ್ಣ, ಕಾಡು ಪ್ರಾಣಿಗಳ ತಡೆ, ಹೊಸ ಮನೆ ಮಂಜೂರಾತಿ, ನಿವೇಶನ ಹಂಚಿಕೆ ಸೇರಿ ಹಲವು ಕೆಲಸಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.
ಆಕರ್ಷಕ ಪಥಸಂಚಲನ!
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಕರ್ಷಕ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು. ಧ್ವಜಾರೋಹಣ ನೆರವೇರಿಸಿದ ಡಿಸಿಎಂ ಡಿಕೆಶಿ, ತದನಂತರ ತೆರೆದ ವಾಹನದಲ್ಲಿ ಕವಾಯತು ವೀಕ್ಷಣೆ ಮಾಡಿದರು. ನಂತರ ಶಾಲಾ ಮಕ್ಕಳು ಸೇರಿ ವಿವಿಧ ಕವಾಯತು ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ಶಾಲಾಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಂಡಿತು. ವಿವಿಧ ಶಾಲಾ ಮಕ್ಕಳು ನಡೆಸಿಕೊಟ್ಟ ನೃತ್ಯ ಪ್ರದರ್ಶನಗಳನ್ನು ಡಿಸಿಎಂ ಸಹಿತ ವೇದಿಕೆಯಲ್ಲಿದ್ದ ಗಣ್ಯರು ವೀಕ್ಷಿಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಗಿರೀಶ್, ದೈಹಿಕ ಶಿಕ್ಷಣ ಶಿಕ್ಷಕ ಸಂಗಯ್ಯ ಹಿರೇಮಠ, ಯೋಗಪಟು ಶಿವಕುಮಾರ್, ಪತ್ರಕರ್ತರಾದ ವಿನ್ಸೆಟ್ ವಿಜಯ್, ಬೇವೂರು ಯೋಗೀಶ್ ಗೌಡ ಸೇರಿ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಮಾಜಿ ಶಾಸಕ ಎಂ.ಸಿ. ಅಶ್ವತ್ಥ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಎಸ್‌ಪಿ ಕಾರ್ತಿಕ್ ರೆಡ್ಡಿ, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಉಪ ವಿಭಾಗಾಧಿಕಾರಿ ಬಿನೋಯ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬೋರ್ ವೆಲ್ ರಂಗನಾಥ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಅರಳಾಪುರ ಸುರೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್. ಗಂಗಾಧರ್, ಮುಖಂಡರಾದ ದುಂತೂರು ವಿಶ್ವನಾಥ್ ಸೇರಿ ಹಲವರು ಇದ್ದರು.