

ಸಂಬರಗಿ/ತಾಂವಶಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೃಷ್ಣಾ ನದಿಗೆ ಅಪಾರ ನೀರು ಬಂದ ಹಿನ್ನೆಲೆಯಲ್ಲಿ ಅಥಣಿ ತಾಲೂಕಿನ ತಾಂವಶಿ ಗ್ರಾಮದ ಅಗ್ರಾನಿ ಹಳ್ಳದಲ್ಲಿನ ನೀರಿನ ರಭಸಕ್ಕೆ ಚಕ್ಕಡಿಯ ಚಕ್ರ ಹೊಂಡದಲ್ಲಿ ಸಿಲುಕಿ ಪಲ್ಟಿಯಾಗಿ ಇಬ್ಬರು ಬಾಲಕರು ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ.
ನಾಗನೂರು ಗ್ರಾಮದ ಗಣೇಶ ಕಾಂಬಳೆ (5), ದೀಪಕ ಕಾಂಬಳೆ (7) ಮೃತ ಬಾಲಕರು. ರೈತ ಸಂಜು ಕಾಂಬಳೆ (32) ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಮುಗಿಸಿಕೊಂಡು ತಂದೆ ಮತ್ತು ಮೂವರು ಮಕ್ಕಳು ಚಕ್ಕಡಿಯಲ್ಲಿ ಮನೆಗೆ ಮರಳಿ ಹೋಗುತ್ತಿದ್ದ ಸಂದರ್ಭದಲ್ಲಿ ಅಗ್ರಾನಿ ಹಳ್ಳದಲ್ಲಿನ ಹೊಂಡದಲ್ಲಿ ಚಕ್ಕಡಿಯ ಚಕ್ರ ಸಿಲುಕಿ ಬಂಡಿ ಪಲ್ಟಿಯಾಗಿದೆ.
ಇದರಿಂದ ಬಂಡಿಯಲ್ಲಿ ರೈತನ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಒಂದು ಎತ್ತು ಕೂಡ ಮುಳುಗಿ ಮೃತಪಟ್ಟಿದೆ. ತೀವ್ರ ಗಾಯಗೊಂಡ ರೈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೊಬ್ಬ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.