ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪೀಠಾಧಿಕಾರ ಸ್ವೀಕಾರ

SWAMIJI NEWS
Published on

ಸಾಲಿಗ್ರಾಮ: ತಾಲೂಕಿನ ಕರ್ಪೂರವಳ್ಳಿ ಜಂಗಮ ಮಠದ ನೂತನ ಪೀಠಾಧಿಪತಿಯಾಗಿ ಶ್ರೀ ಅಭಿನವ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಧಿಕಾರ ಸ್ವೀಕರಿಸಿದರು.

ಬಾಳೆಹೊನ್ನೂರು ರಂಭಾಪುರಿ ಪೀಠದ ಪೀಠಾಧ್ಯಕ್ಷರಾದ ಡಾ.ಶ್ರೀ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ನೂತನ ಪೀಠಾಧಿಪತಿಗೆ ಅಧಿಕಾರ ನೀಡಿ ಹಲವು ಮಠಾಧೀಶರು ಶುಭ ಹಾರೈಸಿದರು.

ರಂಭಾಪುರಿ ಪೀಠದ ಶಾಖಾ ಮಠವಾಗಿರುವ ಕರ್ಪೂರವಳ್ಳಿ ಜಂಗಮ ಮಠಾಧೀಶರಾಗಿದ್ದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಲಿಂಗೈಕ್ಯರಾಗಿದ್ದರು. ಹೀಗಾಗಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಸಂಬಂಧಿ ಶ್ರೀ ಅಭಿನವ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಮಠಾಧಿಪತಿಯಾಗಿ ನೇಮಕ ಮಾಡಲಾಯಿತು. ತಾಲೂಕಿನ ಕೊಡಿಯಾಲ ಗ್ರಾಮದ ರೇಣುಕಾ ಸ್ವಾಮಿ ಹಾಗೂ ಲತಮ್ಮ ದಂಪತಿಯ ಪುತ್ರ, 27 ವರ್ಷದ ಅಭಿನವ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಮಠ ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡು ಮತ್ತಷ್ಟು ಎತ್ತರಕ್ಕೆ ಬೆಳೆಸುವ ಸಂಕಲ್ಪ ಮಾಡಿದರಲ್ಲದೆ ಗ್ರಾಮಸ್ಥರು ಹಾಗೂ ಭಕ್ತರ ಸಹಕಾರ ಕೋರಿದರು.

ಬಳಿಕ ಆಶೀರ್ವಚನ ನೀಡಿದ ಡಾ.ಶ್ರೀ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರು, ಮಠದ ಹಿಂದಿನ ಪೀಠಾಧಿಪತಿಗಳಾಗಿದ್ದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಠವನ್ನು ಶೈಕ್ಷಣಿಕ, ಧಾರ್ಮಿಕವಾಗಿ ಮುನ್ನಡೆಸಿದ್ದರು. ನೂತನ ಪೀಠಾಧಿಪತಿಗಳು ಗ್ರಾಮಸ್ಥರು, ಎಲ್ಲ ಭಕ್ತರ ಸಹಕಾರದಿಂದ ಈ ಮಠವನ್ನು ಮತ್ತಷ್ಟು ಅಭಿವೃದ್ಧಿ ಹಾದಿಯಲ್ಲಿ ನಡೆಸಿಕೊಂಡು ಮಾದರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ನೂತನ ಶ್ರೀಗಳಿಗೆ ನಮ್ಮ ಮಠದಲ್ಲಿ ತರಬೇತಿ ನೀಡಲಾಗುವುದು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಂದೇಶ ಸಾರಿದರು. ನಂತರ ನೂತನ ಶ್ರೀಗಳನ್ನು ಅಡ್ಡಪಲ್ಲಕ್ಕಿ ಮಹೋತ್ಸವ ಮೂಲಕ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಶಾಸಕ ಡಿ.ರವಿಶಂಕರ್ ಮಾತನಾಡಿ, ಮಠದ ಅಭಿವೃದ್ಧಿಗೆ ಸಹಾಯ ಮಾಡುವ ಮೂಲಕ ಸದಾ ನೂತನ ಸ್ವಾಮೀಜಿ ಅವರೊಂದಿಗೆ ಸಹಕಾರ ನೀಡುತ್ತೇನೆ. ಈ ಭಾಗದ ಎಲ್ಲ ಭಕ್ತರು ಹೆಚ್ಚಿನ ಸಹಕಾರ ನೀಡುವ ಮೂಲಕ ಮಠವನ್ನು ಬೆಳೆಸೋಣ. ಮಠವನ್ನು ಶೈಕ್ಷಣಿಕ, ಆರ್ಥಿಕವಾಗಿ ಅಭಿವೃದ್ಧಿ ಮಾಡಿ ಮಠದ ಕಡೆ ಹೆಚ್ಚು ಭಕ್ತರು ಬರುವಂತಹ ವಾತಾವರಣ ನಿರ್ಮಾಣ ಮಾಡಿಕೊಳ್ಳಿ ಎಂದು ಹೇಳಿದರು.

ಎಡೆಯೂರಿನ ಬಾಳೆಹೊನ್ನೂರು ಶಾಖಾ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ತಣ್ಣೀರು ಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಎಲೆ ಮುದ್ದನಹಳ್ಳಿ ಮಠದ ಶ್ರೀ ಮಲ್ಲೇಶ ಸ್ವಾಮೀಜಿ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್, ಜಿಪಂ ಮಾಜಿ ಉಪಾಧ್ಯಕ್ಷ ಅಡಗೂರು ಚನ್ನಬಸಪ್ಪ, ಮುಖಂಡರಾದ ಎಲೆ ಮುದ್ದನಹಳ್ಳಿ ಲಿಂಗಪ್ಪ, ಗಾಯನಹಳ್ಳಿ ಕುಮಾರಸ್ವಾಮಿ, ವಕೀಲ ಕೆ.ವಿ.ಮಹೇಶ್, ಗ್ರಾಮದ ಮುಖಂಡರು, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net