ಘೋಟ್ನೇಕರ್‌ ಬಿಜೆಪಿ ಸೇರಲು ಸಿದ್ಧರಿದ್ದಾರೆ, ಆದರೆ....

Untitled
Published on

ವಿಜಯವಾಣಿ ಸುದ್ದಿಜಾಲ ಕಾರವಾರ

ಮಾಜಿ ಎಂಎಲ್‌ಸಿ ಕಾಂಗ್ರೆಸ್‌ನ ಶ್ರೀಕಾಂತ ಘೋಟ್ನೇಕರ್ ನಮ್ಮ ಸಂಪರ್ಕದಲ್ಲಿದ್ದಾರೆ. ಅವರು ಬಿಜೆಪಿ ಸೇರಲು ಸಿದ್ಧರಿದ್ದಾರೆ. ಆದರೆ, ಟಿಕೆಟ್ ನೀಡುವುದನ್ನು ಖಚಿತಪಡಿಸಬೇಕು ಎಂಬುದು ಅವರ ಆಗ್ರಹ. ಮೊದಲು ಪಕ್ಷದ ಸೇರಿ, ಆಮೇಲೆ ಟಿಕೆಟ್ ಖಚಿತ ಮಾಡುತ್ತೇವೆ ಎಂಬುದು ಬಿಜೆಪಿ ಹೈಕಮಾಂಡ್ ಹೇಳುತ್ತಿದೆ..ಹೀಗೆ ಹೇಳಿದವರು ಜಿಪಂ ಮಾಜಿ ಉಪಾಧ್ಯಕ್ಷ, ಬಿಜೆಪಿಯ ಎಲ್‌.ಟಿ.ಪಾಟೀಲ್‌ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ನಿರ್ಣಾಯಕ ಮತದಾರರಾಗಿದ್ದೇವೆ. ನಮ್ಮ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷದ ಮುಂದೆ ಬೇಡಿಕೆ ಇಟ್ಟಿದ್ದೇವೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಯಲ್ಲಾಪುರ ಕ್ಷೇತ್ರಗಳಲ್ಲಿ ಮರಾಠರಿಗೆ ಟಿಕೆಟ್ ನೀಡಬೇಕು ಎಂಬುದು ನಮ್ಮ ಒತ್ತಾಯ. ಮರಾಠರಿಗೆ ಟಿಕೆಟ್ ನೀಡಿದರೆ ಎಲ್ಲರೂ ಬೆಂಬಲ ಮಾಡಿ ಗೆಲ್ಲಿಸುತ್ತೇವೆ ಎಂದರು.

ಕೆಟಗರಿ ಬದಲಿಸಿ:
ಮರಾಠಾ ಸಮುದಾಯವನ್ನು ಪ್ರವರ್ಗ 3ಬಿ ಯಿಂದ 2ಎಗೆ ಸೇರಿಸಿ ಮೀಸಲಾತಿ ಒದಗಿಸಬೇಕು. ಇಲ್ಲದಿದ್ದಲ್ಲಿ ವಿಧಾನಸೌಧದ ಎದುರು ಆಮರಣಾಂತ ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು. ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದ ಸುಮಾರು 20 ಜಿಲ್ಲೆಗಳಲ್ಲಿ 98 ವಿವಿಧ ಮರಾಠಾ ಉಪ ಪಂಗಡಗಳಿವೆ. 50 ಲಕ್ಷ ಜನಸಂಖ್ಯೆ ಇದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ನಾವು ಮರಾಠರು ಹಿಂದುಳಿದಿದ್ದೇವೆ. ನಮ್ಮ ಸಮುದಾಯವನ್ನು ಹಿಂದುಳಿದ ವರ್ಗದ ಮೀಸಲಾತಿ 2ಎಗೆ ಸೇರಿಸಬೇಕು ಎಂದು ಹಿಂದೆ ಕಾಂಗ್ರೆಸ್ ಸರ್ಕಾರದ ಅವಽಯಲ್ಲಿ ಒತ್ತಾಯಿಸಿದ್ದೆವು, ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೂ ಮನವಿ ಮಾಡಿದ್ದೆವು. ಆಗಲೂ ಸಾಧ್ಯವಾಗಿಲ್ಲ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಜಯಪ್ರಕಾಶ ಹೆಗ್ಡೆ ಅವರನ್ನು ಭೇಟಿಯಾಗಿ ಚರ್ಚಿಸಿದಾಗ. ಪ್ರಸ್ತಾಪವನ್ನು ಕೇಂದ್ರಕ್ಕೆ ಕಳಿಸಲಾಗಿದೆ ಎಂದಿದ್ದಾರೆ ನಮ್ಮ ಬೇಡಿಕೆ ಈಡೇರುವ ನಿರೀಕ್ಷೆ ಇದೆ. ಈಡೇರದಿದ್ದಲ್ಲಿ ಹೋರಾಟ ನಿಶ್ಚಿತ ಎಂದರು. ಸಮಾಜದ ಮುಖಂಡರಾದ ಉಡಚಪ್ಪಾ ಬೊಬಾಟಿ, ಎಸ್.ಕೆ.ಗೌಡ, ನಾಗರಾಜ ಬೆಣ್ಣಿ, ಸುಭಾಷ ಕಳಸೂರಕರ್, ಶ್ಯಾಮಲಾ ಕುರಿಯವರ್, ಸಂತೋಷ ಆಚಾರಿ, ಜ್ಯೋತಿ ಡೋರಿ, ಕವಿತಾ ಮಾತ್ರೋಜಿ, ಸುಧಾ ನೆಲ್ಲಿಕೊಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net