ಘಟಪ್ರಭಾದಲ್ಲಿ ಅಕ್ರಮ ಮರಳುಗಾರಿಕೆ ಸದ್ದು !

bkt-05-12
ಮುಧೋಳ ತಾಲೂಕಿನ ಘಟಪ್ರಭಾ ನದಿಯಲ್ಲಿ ಬೋಟ್ ಹಚ್ಚಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು.
Published on

ಅಶೋಕ ಶೆಟ್ಟರ, ಬಾಗಲಕೋಟೆ: ಪ್ರವಾಹದಿಂದ ನಲುಗುತ್ತಿರುವ ಘಟಪ್ರಭಾ ಒಡಲು ಇದೀಗ ಅಕ್ರಮ ಮರಳು ದಂದೆಗೆ ಸಿಕ್ಕು ವಿಲವಿಲ ಎನ್ನುತ್ತಿದೆ. ಹಾಡು ಹಗಲೇ ಅನಽಕೃತವಾಗಿ ಬೋಟ್ ಹಚ್ಚಿ ನದಿ ಬಗೆಯುವ ಕೆಲಸ ನಡೆದಿದ್ದರೂ ಅಧಿಕಾರಿಗಳು ಮಾತ್ರ ಏನೂ ಗೊತ್ತೆ ಇಲ್ಲವೇನೋ ಎಂದು ಜಾಣ ಮೌನ ವಹಿಸುತ್ತಿದ್ದಾರೆ...!


ಜಿಲ್ಲೆಯ ಮುಧೋಳ ತಾಲೂಕು ವ್ಯಾಪ್ತಿಯಲ್ಲಿ ಬರುವ ಘಟಪ್ರಭಾ ನದಿಯಲ್ಲಿ ಹಲವು ದಿನಗಳಿಂದ ಹತ್ತಾರು ಬೋಟ್ ಗಳನ್ನು ಹಚ್ಚಿ ಮರಳು ಎತ್ತುವ ಕೆಲಸ ಎಗ್ಗಿಲ್ಲದೇ ಸಾಗಿದೆ. ಜಂಬಗಿ ಕೆಡಿ, ಬದರಿ, ಜೀರಗಾಳ, ಚಿಚಖಂಡಿ, ಒಂಟಗೋಡ ಹೀಗೆ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ನದಿಯಲ್ಲಿ ಈ ಅನಧಿಕೃತ ಚಟುವಟಿಕೆ ನಡೆಯುತ್ತಿದೆ.

ನದಿಯಲ್ಲಿ ನೀರು ಇರುವುದರಿಂದ ಬೋಟ್ ಹಚ್ಚಿ ಮರಳು ಎತ್ತುತ್ತಿದ್ದಾರೆ. ಬೋಟ್ ಗಳು ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ. ಅಕ್ರಮ ಮರಳುಕೋರರ ಕಬಂಧ ಬಾಹು ಚಾಚುತ್ತಲೇ ಇದೆ. ಇಷ್ಟೊಂದು ಹವ್ಯಾಹತವಾಗಿ ನಡೆಯಬೇಕಿದ್ದರೆ ಪ್ರಭಾವಿಗಳು, ಅಧಿಕಾರಿಗಳ ಬೆಂಬಲ ಇಲ್ಲದೇ ನಡೆಯಲು ಸಾಧ್ಯವೆ ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಘಟಪ್ರಭಾ ನದಿ ಪಾತ್ರದಲ್ಲಿ ಹೀಗೆ ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದು ಹೊಸದೇನು ಅಲ್ಲ. ಈ ಹಿಂದೆಯೂ ಇದು ಇದ್ದೆ ಇತ್ತು. ಆದರೆ, ಇದೀಗ ಅದು ವ್ಯಾಪಕವಾಗಿ ನಡೆಯುತ್ತಿದೆ. ಬೋಟ್ ಗಳು ಸಂಖ್ಯೆಯೂ ಹೆಚ್ಚುತ್ತಿದೆ. ಜಂಬಗಿ ಕೆಡಿ ಯಿಂದ ಢವಳೇಶ್ವರದ ವರೆಗೆ ೧೨ಕ್ಕೂ ಹೆಚ್ಚು ಬೋಟ್ ಗಳನ್ನು ನದಿಗೆ ಬಿಟ್ಟು ಮರಳು ಎತ್ತುತ್ತಿದ್ದಾರೆ. ಬೇರೆ ಕಡೆಗೂ ಈ ದಂಧೆ ನಡೆಯುತ್ತಿದೆ. ಇದನ್ನು ಸಾಮಾನ್ಯ ಜನರು ಪ್ರಶ್ನಿಸಲು ಅಕ್ರಮಕೋರರ ಭಯ ಇದೆ. ಅವರನ್ನು ಎದುರು ಹಾಕಿಕೊಳ್ಳಲು ಆಗಲ್ಲ. ಹೀಗಾಗಿ ಕಣ್ಣಿಗೆ ಕಂಡರೂ ಕಾಣದಂತೆ ಇರುವ ಪರಿಸ್ಥಿತಿ ಇದೆ ಎಂದು ನದಿ ಪಾತ್ರದ ಅನೇಕರು ಹೇಳುತ್ತಾರೆ.

ಘಟಪ್ರಭಾ ನದಿ ಪಾತ್ರದ ಗ್ರಾಮಗಳು ಈಗಾಗಲೇ ಕಳೆದ ಐದಾರು ವರ್ಷಗಳಿಂದ ಪ್ರವಾಹದಿಂದಾಗಿ ಸಾಕಷ್ಟು ಹಾನಿ ಅನುಭವಿಸುತ್ತಿದ್ದಾರೆ. ಮುಖ್ಯವಾಗಿ ನದಿಯಲ್ಲಿ ನಡೆಯುವ ಅಕ್ರಮ ಮರಳುಗಾರಿಕೆ ಸಹ ಈ ಪ್ರವಾಹ ಪರಿಸ್ಥಿತಿ ಹೆಚ್ಚಲು ಕಾರಣ ಎನ್ನುವ ಮಾತುಗಳು ಇವೆ. ಪ್ರಸಕ್ತ ವರ್ಷ ಉಂಟಾಗಿದ್ದ ಪ್ರವಾಹದ ಸಂಬಂರ್ಧದಲ್ಲಿ ಮರಳು ಎತ್ತುವುದನ್ನು ನಿಲ್ಲಿಸಿದ್ದ ಅಕ್ರಮಕೋರರು, ಪ್ರವಾಹ ಕಡಿಮೆಯಾಗಿ ನದಿ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಮತ್ತೆ ತಮ್ಮ ಅಕ್ರಮವನ್ನು ಶುರು ಹಚ್ಚಿಕೊಂಡಿದ್ದಾರೆ. ಇದೀಗ ಬೋಟ್ ಗೆ ಮೋಟಾರ್ ಅಳವಡಿಸಿ ಮರಳು ಎತ್ತುತ್ತಿರುವುದರಿಂದ ಪರಿಸರಕ್ಕೆ ಹೆಚ್ಚಿನ ಹಾನಿ ಆಗುತ್ತದೆ. ಪರಿಸ್ಥಿತಿ ಹೀಗಿದ್ದರೂ ಸಹ ಇದನ್ನು ತಡೆಯಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುಂದಾಗದೇ ಇರುವುದು ಅಚ್ಚರಿಯನ್ನುಂಟು ಮಾಡುತ್ತಿದೆ. ಗಮನಾರ್ಹ ಎಂದರೆ ಮುಧೋಳ ತಾಲೂಕು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಪ್ರತಿನಿಧಿಸುವ ಕ್ಷೇತ್ರ. ಸಚಿವರ ಕ್ಷೇತ್ರದಲ್ಲಿ ಅಕ್ರಮಕ್ಕೆ ತಡೆ ಬೀಳಲ್ಲ ಎಂದರೆ ಉಳಿದ ಕಡೆಗೆ ಬೀಳುತ್ತಾ?

ಮತ್ತೆ ತಲೆ ಎತ್ತುತ್ತಿದೆ ಅಕ್ರಮದ ಜಾಲ :
ಜಿಲ್ಲೆಯಲ್ಲಿ ಮೂರು ನದಿಗಳು ಹರಿದಿರುವುದಿಂದ ಇಲ್ಲಿ ಅಕ್ರಮ ಮರಳುಗಾರಿಕೆ ದೊಡ್ಡಮಟ್ಟದಲ್ಲೆ ನಡೆಯುತ್ತದೆ. ಈ ಮೂರು ನದಿ ಪಾತ್ರಗಳಲ್ಲಿ ರಾಜಾರೋಷವಾಗಿ ಮರಳುಗಾರಿಕೆ ನಡೆಯುತ್ತಲೇ ಇದೆ. ಹಿಂದೆ ನೂರಾರು ಬೋಟ್ ಗಳನ್ನು ಹಚ್ಚಿ ಮರಳು ಎತ್ತುತ್ತಿದ್ದರು. ಇದೇ ಕಾರಣಕ್ಕೆ ೨೦೧೩ ಮತ್ತು ೨೦೧೪ರಲ್ಲಿ ಕೆಲ ಹಿರಿಯ ಅಧಿಕಾರಿಗಳ ತಲೆದಂಡವೂ ಆಗಿತ್ತು. ಅದಾಗ್ಯೂ ಅಕ್ರಮ ಮಾತ್ರ ಕಡಿಮೆ ಆಗಿರಲಿಲ್ಲ. ಕೊನೆಗೆ ಪಟ್ಟಾ ಜಮೀನುಗಳಲ್ಲಿ ಮರಳುಗಾರಿಕೆಗೆ ಅವಕಾಶ ಕಲ್ಪಿಸಿದ್ದರಿಂದ ಅಕ್ರಮ ಸ್ವಲ್ಪ ಮಟ್ಟಿಗೆ ತಗ್ಗಿತ್ತು. ಬಳಿಕ ಅಲ್ಲಲ್ಲಿ ಅಕ್ರಮ ಮರಳುಗಾರಿಕೆ ನಡೆದು ಬಂದಿದ್ದರೂ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿರಲಿಲ್ಲ. ಇದೀಗ ಘಟಪ್ರಭಾ ನದಿಯಲ್ಲಿ ಮರಳು ಎತ್ತುತ್ತಿರುವುದು ಜೋರಾಗಿ ನಡೆಯುತ್ತಿದೆ. ನೀರು ಖಾಲಿಯಾದಾಗ ಹೆಚ್ಚಾಗಿ ನಡೆಯುತ್ತಿದ್ದ ಮರಳುಗಾರಿಕೆ ಇದೀಗ ನದಿಯಲ್ಲಿ ನೀರು ಇದ್ದಾಗಲೂ ಮತ್ತೆ ಬೋಟ್ ಹಚ್ಚಿ ಅಕ್ರಮವಾಗಿ ಮರಳು ತೆಗೆಯುವುದು ಆರಂಭವಾಗಿದೆ. ಅಽಕಾರಿಗಳು ಕ್ರಮಕ್ಕೆ ಮುಂದಾಗದೇ ಪ್ರಭಾವಕ್ಕೆ ಮಣಿದರೆ ಮತ್ತೆ ಜಿಲ್ಲೆಯಲ್ಲಿ ಹಿಂದಿನಂತೆ ಮತ್ತೆ ನೂರಾರು ಬೋಟ್‌ಗಳು ಮರಳು ತೆಗೆಯಲು ನದಿಗೆ ಇಳಿದರೂ ಅಚ್ಚರಿ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net