ಗ್ರಾಹಕರಾಗಿ ಪ್ರತಿ ಖರೀದಿ ವಸ್ತುವಿಗೂ ರಶೀದಿ ಕೇಳಿ ಪಡೆದುಕೊಳ್ಳಿ

bkt-18-2
Published on

ಬಾಗಲಕೋಟೆ: ಎಲ್ಲರೂ ದಿನನಿತ್ಯ ಒಂದಿಲ್ಲ ಒಂದು ರೀತಿ ಗ್ರಾಹಕರಾಗಿದ್ದು , ನಮಗೆ ಮೋಸವಾದಾಗ ಗ್ರಾಹಕರ ವೇದಿಕೆಗೆ ಹೋಗ್ತೀವಿ, ಆದರೆ ಅದಕ್ಕೂ ಮೊದಲು ಕೆಲ ವಿಷಯಗಳ ಕುರಿತು ಎಚ್ಚರ ವಹಿಸಬೇಕು. ನಮ್ಮ ಪ್ರತಿ ವ್ಯವಹಾರಗಳಿಗೂ ರಶೀದಿ ಸಹಿತ ಸೂಕ್ತ ದಾಖಲೆಗಳನ್ನು ಕೇಳಿ ಪಡೆಡು ಅದನ್ನು ಕಾಯ್ದುಕೊಂಡಾಗ ಮಾತ್ರ ಗ್ರಾಹಕರ ವೇದಿಕೆ ನಮಗೆ ನಿಮಗೆ ಸಹಕರಿಸಲು ಸಾಧ್ಯ ’ ಎಂದು ಹಿರಿಯ ದಿನಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ಪಿ ದಿಡ್ಡಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಹಳೆ ಸಭಾಂಗಣದಲ್ಲಿ ಮಂಗಳವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನಶಾಸ್ತ್ರ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಹಾಗೂ ಇತರೆ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ‘ಗ್ರಾಹಕರ ವೇದಿಕೆ ತಲುಪುವ ಮುನ್ನ ಒಬ್ಬ ಗ್ರಾಹಕನಾಗಿ ನಾವು ನೀವು ಎಲ್ಲರೂ ಕೆಲವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಎಲ್ಲ ಖರೀದಿಗೂ ರಶೀದಿ ಪಡೆದುಕೊಳ್ಳಬೇಕು, ಯಾವುದೇ ಲೋನ್ ಅಥವಾ ಇನ್ನಿತರ ವ್ಯವಹಾರಗಳಲ್ಲಿ ಎಲ್ಲೆಂದರಲ್ಲಿ ಸಹಿ ಮಾಡದಂತೆ ಎಚ್ಚರಿಕೆ ವಹಿಸಬೇಕು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ ಎಂ ‘ದಿನನಿತ್ಯದ ಬದುಕಿನಲ್ಲಿ ನಾವೆಲ್ಲರು ಗ್ರಾಹಕರಾದ ಕಾರಣ ಗ್ರಾಹಕರ ಹಕ್ಕುಗಳನ್ನು ಅರಿಯುವುದು ಅಗತ್ಯ. ನಮ್ಮ ದೈನಂದಿನ ಪರಿಧಿಯಲ್ಲಿ ಬಳಸುವ ವಸ್ತುಗಳಲ್ಲಿ ನಮಗೆ ಮತ್ತು ಪರಿಸರಕ್ಕೆ ಹಾನಿಕಾರಕಗಳು ಎಷ್ಟಿವೆ ಎಂದು ತಿಳಿದು, ಪ್ರಕೃತಿಗೆ ಪೂರಕವಾಗುವ ಜೀವನಶೈಲಿ ರೂಪಿಸಿಕೊಳ್ಳಬೇಕು. ವಿಶ್ವ ಗ್ರಾಹಕರ ದಿನದ ಈ ವರ್ಷದ ಧ್ಯೇಯ ವಾಕ್ಯ ಸುಸ್ಥಿರ ಜೀವನಶೈಲಿಗೆ ಒಂದು ಸರಳ ಪರಿವರ್ತನೆ.ಅನುಸಾರ. ಪರಿವರ್ತನೆ ಇಂದಿನಿಂದಲೇ ಆಗಬೇಕಿದ್ದು, ಗ್ರಾಹಕರು ಕೃತಕ ಬಣ್ಣ, ಪ್ಲಾಸ್ಟಿಕ್ ನಂತಹ ವಿಷಕಾರಿ ಅಂಶಗಳನ್ನು ತ್ಯಜಿಸಿ ಪ್ರಕೃತಿ ಸ್ನೇಹಿ ವ್ಯವಹಾರಕ್ಕೆ ಒತ್ತು ನೀಡಬೇಕು. ಗ್ರಾಹಕರ ಹಕ್ಕುಗಳ ಕುರಿತು ವಿದ್ಯಾರ್ಥಿಗಳು ಸಹ ಸ್ವಯಂಪ್ರೇರಿತರಾಗಿ ಜಾಗೃತಿ ಕಾರ್ಯಗಳಲ್ಲಿ ತೊಡಗಬೇಕು’ ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ನ್ಯಾಯವಾದಿ ಹಾಗೂ ಕಾನೂನು ಮಹಾವಿದ್ಯಾಲಯ ಉಪನ್ಯಾಸಕ ಎಸ್.ಎನ್.ಕರ್ಜಗಿ ‘ ಮಾತನಾಡಿ ಗ್ರಾಹಕರ ಹಕ್ಕುಗಳ ರಕ್ಷಣೆ ಇಂದು ನಿನ್ನೆಯದಲ್ಲ, ಮನುವಿನ ಕಾಲದಿಂದಲೂ ಬಂದಿದ್ದು, ಬ್ರಿಟಿಷ್ ಆಳ್ವಿಕೆಯಲ್ಲೂ ಇದರ ಪರಿಕಲ್ಪನೆ ಇತ್ತು. ಆದರೆ 1986ರ ಕಾಯ್ದೆ ನಂತರ ಕಾನೂನಾತ್ಮಕವಾಗಿ ಗ್ರಾಹಕರ ಹಕ್ಕುಗಳ ಜಾರಿಗೆ ಬಂದವು. ಅದಕ್ಕೂ ಮೊದಲು ಗ್ರಾಹಕರ ಹಕ್ಕಿಗೆ ಬರೀ ಸಿವಿಲ್ ನ್ಯಾಯಾಲಯಗಳು ಮಾತ್ರ ಇದ್ದವು, ಅದರ ನಂತರ ಆಯೋಗಗಳು, ಗ್ರಾಹಕರ ವೇದಿಕೆ ಎಲ್ಲವೂ ಆರಂಭವಾಗುವುದರ ಮೂಲಕ ಗ್ರಾಹಕರು ಕೇಳುವ ಹಕ್ಕು ಪಡೆದಿದ್ದು, ಈ ಹಕ್ಕನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳಿ’ ಎಂದರು.

ಗ್ರಾಹಕರ ಹಕ್ಕುಗಳ ಕುರಿತು ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ. ಶಶಿಧರ ಕುರೇರ , ‘ಗ್ರಾಹಕರಾಗಿ ನಮ್ಮ ಆಯ್ಕೆಯ ಕುರಿತು ಎಚ್ಚರವಿರಬೇಕು. ಹೆಚ್ಚಾಗಿ ಇಂದಿನ ಯುವ ಜನ ಸ್ಟಾರ್ ನಟ ನಟಿಯರು, ಕ್ರಿಕೆಟಿಗರ ಜಾಹೀರಾತು ನೋಡಿ, ಅವರ ಮಾತುಗಳಿಗೆ ಮರುಳಾಗಿ ಖರೀದಿಸುತ್ತಾರೆ. ಅದರ ಬದಲಾಗಿ ಉತ್ಪನ್ನಗಳ ಗುಣಮಟ್ಟ ನೋಡಿ ಖರೀದಿಸಬೇಕು. ಗ್ರಾಹಕರಿಗೆ ಮೋಸವಾದಲ್ಲಿ ಗ್ರಾಹಕರ ಕೋರ್ಟ್ ಗೆ ಅರ್ಜಿ ಸಲ್ಲಿಸಬೇಕು. ಅದರಲ್ಲೂ ಇಂದಿನ ಆನ್ ಲೈನ ಯುಗದಲ್ಲಿ ಹೆಚ್ಚಿನ ಎಚ್ಚರವಿರಲಿ’ ಎಂದು ಹೇಳಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯೆ ಸಿ.ಹೆಚ್ ಸಮೀಉನ್ನಿಸಾ ಅಬ್ರಾರ್ ‘ ಮಾತನಾಡಿ ಇಂದಿನ ಪೀಳಿಗೆ ಜಾಹೀರಾತಿಗೆ ಮಾರುಹೋಗುತ್ತಿವೆ. ಸ್ಟಾರ್ ನಟರ ಜಾಹೀರಾತುಗಳಿಂದ ಪ್ರಭಾವಿತರಾಗಿ ಗುಟ್ಕಾದಂತಹ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಈ ತರಹದ ಬೆಳವಣಿಗೆ ನಿಲ್ಲಬೇಕು. ಯಾವುದೇ ಗ್ರಾಹಕ ಹಕ್ಕಿನ ಕುರಿತ ಅರ್ಜಿಗಳನ್ನು ಎಲ್ಲಿಂದ ಬೇಕಾದರೂ ಸಲ್ಲಿಸಲು ನಮ್ಮದೇ ಆದ ಇ-ಜಾಗೃತಿ ಎಂಬ ವೆಬ್ ಸೈಟ್ ಆರಂಭವಾಗಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾಹಕರ ಹಕ್ಕುಗಳ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ್ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಪ್ರಭುಲಿಂಗಸ್ವಾಮಿ ಚ ಹಿರೇಮಠ ವಹಿಸಿದ್ದರು. ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಬಿ ಕಂಕಣವಾಡಿ ಸ್ವಾಗತಿಸಿ , ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ ವಿವೇಕಾನಂದ ,ಆಯೋಗದ ಸದಸ್ಯ ಡಿ.ವೈ. ಬಸಾಪುರ ಸೇರಿದಂತೆ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net