

ಪಾಂಡವಪುರ: ಹೈನುಗಾರಿಕೆ ಗ್ರಾಮೀಣ ಭಾಗದ ಜನರ ಜೀವನ ಕಟ್ಟಿಕೊಡದಿದ್ದರೆ ಸಾಕಷ್ಟು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತಿದ್ದವು ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ತಿಳಿಸಿದರು.
ತಾಲೂಕಿನ ಕದಲಗೆರೆ ಗ್ರಾಮದಲ್ಲಿ 15.70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ನೂತನ ಡೇರಿ ಕಟ್ಟಡ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ನೂತನ ಕಟ್ಟಡ ನಿರ್ಮಾಣಕ್ಕೆ ಆಸಕ್ತಿ ವಹಿಸಿದೆ. ಅವರಿಗೆ ಬೆಂಬಲವಾಗಿ ನಿಂತು ಮನ್‌ಮುಲ್‌ನಿಂದ ಸಿಗಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸಲು ನಾನು ಸಹಕಾರ ನೀಡುತ್ತೇನೆ. ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದಿಂದ ಸದ್ಯ 1 ಲಕ್ಷ ರೂ. ಸಹಾಯಧನ ಸಿಗುತ್ತಿದೆ. ಈ ಮೊತ್ತವನ್ನು 2 ಲಕ್ಷ ರೂ.ಗೆ ಹೆಚ್ಚಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಡೇರಿ ಅಧ್ಯಕ್ಷ ನರಸಿಂಹೇಗೌಡ, ಉಪಾಧ್ಯಕ್ಷ ಕೃಷ್ಣೇಗೌಡ, ಕಾರ್ಯದರ್ಶಿ ಮೋಹನ್, ನಿರ್ದೇಶಕರಾದ ಹಾಳೇಗೌಡ, ಚೌಡೇಗೌಡ, ನವೀನ, ಯೋಗರಾಜು, ಮಂಗಳಮ್ಮ, ಪುಟ್ಟಮ್ಮ, ಮುಖಂಡರಾದ ಪುಟ್ಟಸ್ವಾಮಿಗೌಡ, ಅಪ್ಪಾಜಿಗೌಡ, ಅನಿಲ್‌ಕುಮಾರ್, ದಿವಾಕರ್, ದಾಸೇಗೌಡ ಇದ್ದರು.