

ಕೆ.ಆರ್.ಪೇಟೆ: ಗ್ರಾಮೀಣ ಪ್ರದೇಶದ ಯುವಕರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಯುವಕರ ವಲಸೆ ನಿಲ್ಲಬೇಕಾದರೆ ಬ್ಯಾಂಕ್‌ಗಳು ಆಸಕ್ತ ನಿರುದ್ಯೋಗಿ ಯುವಕರಿಗೆ ಅವರ ಕೌಶಲಕ್ಕೆ ಅನುಗುಣವಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ನೀಡುವಂತೆ ಶಾಸಕ ಎಚ್.ಟಿ.ಮಂಜು ಮನವಿ ಮಾಡಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ (ಎನ್‌ಎಲ್‌ಎಂ) ಅನುಷ್ಠಾನ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಯುವಕರ ವಲಸೆ ಇಂದಿನ ಬಹುದೊಡ್ಡ ಸಮಸ್ಯೆಯಾಗಿದ್ದು ಹಳ್ಳಿಗಳು ವೃದ್ಧರ ಕೇಂದ್ರಗಳಾಗುತ್ತಿವೆ. ಹೊಟ್ಟೆಪಾಡಿಗೆ ನಗರ ಪ್ರದೇಶದಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾಗಿ, ಹೋಟೆಲ್ ಮತ್ತಿತರ ಸ್ಥಳಗಳಲ್ಲಿ ರೈತರ ಮಕ್ಕಳು ಅತ್ಯಂತ ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದಾರೆ. ಇದರಿಂದ ಕೃಷಿ ಚಟುವಟಿಕೆಗಳ ಮೇಲೂ ನಕಾರಾತ್ಮಕ ಪರಿಣಾಮ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸಂಪೂರ್ಣ ಕೃಷಿ ಚಟುವಟಿಕೆಗಳಿಗೆ ಮೀಸಲಾದ ತೋಟಗಾರಿಕೆ, ಕೃಷಿ, ರೇಷ್ಮೆ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಗಳಿವೆ. ಈ ಐದು ಇಲಾಖೆಗಳೂ ಪರಸ್ಪರ ಒಗ್ಗೂಡಿ ಸರ್ಕಾರದ ಸಹಾಯಧನ ಯೋಜನೆಯ ಮೂಲಕ ರೈತರ ಮಕ್ಕಳು ಪಶು ಸಾಕಣೆ, ಕುರಿ, ಕೋಳಿ, ಮೇಕೆ, ಮೊಲ, ಹಂದಿ ಸಾಕಣೆ, ಮೀನುಗಾರಿಕೆ, ತೋಟಗಳ ಅಭಿವೃದ್ಧಿ ಮುಂತಾದ ಕೃಷಿ ಮತ್ತು ಕೃಷಿಕರಿಗೆ ಪೂರಕವಾದ ಸ್ವಯಂ ಉದ್ಯೋಗ ಕೈಗೊಳ್ಳಲು ಇಲಾಖೆ ಮೂಲಕ ರೂಪಿಸಿರುವ ಯೋಜನೆಗಳು ಮತ್ತು ಅವುಗಳ ಅನುಷ್ಠಾನಕ್ಕೆ ಅಗತ್ಯವಾದ ಬ್ಯಾಂಕ್‌ಸಾಲ ಸೌಲಭ್ಯಗಳನ್ನು ಒದಗಿಸಿಕೊಟ್ಟರೆ ಗ್ರಾಮೀಣ ಪ್ರದೇಶದ ಆರ್ಥಿಕ ಅಭಿವೃದ್ಧಿಯಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗಿಗಳ ಸಂಖ್ಯೆ ಹೆಚ್ಚಾದರೆ ನಗರ ಪ್ರದೇಶಗಳ ಮೇಲಿನ ವಲಸೆ ತಗ್ಗುತ್ತದೆ ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಪಶುಪಾಲನಾ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಆದರೆ, ಬ್ಯಾಂಕ್‌ಗಳ ಸಾಲ ನೀತಿಯಿಂದ ಕುರಿ, ಕೋಳಿ, ಹಂದಿ, ಮೇಕೆ ಮತ್ತು ಪಶುಪಾಲನೆಯಂತಹ ಉದ್ಯಮ ಸ್ಥಾಪಿಸಲು ರೈತರ ಮಕ್ಕಳು ಅಗತ್ಯ ಸಾಲ ಪಡೆಯಲಾಗುತ್ತಿಲ್ಲ. ಇದರ ನಿವಾರಣೆಗಾಗಿಯೇ ಇಂದು ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವ ರೈತರ ಮಕ್ಕಳು, ಬ್ಯಾಂಕ್‌ಗಳ ವ್ಯವಸ್ಥಾಪಕರು ಮತ್ತು ಪಶುಪಾಲನಾ ಇಲಾಖೆ ಅಧಿಕಾರಿಗಳ ಮುಖಾಮುಖಿ ಸಭೆ ನಡೆಸಲಾಗುತ್ತಿದೆ. ತಾಲೂಕಿನಲ್ಲಿ ಹಲವು ಬ್ಯಾಂಕುಗಳಿವೆ. ಬ್ಯಾಂಕ್ ತಮ್ಮ ವ್ಯಾಪ್ತಿಯ ಕನಿಷ್ಠ ಐದು ಜನ ರೈತ ಉದ್ಯಮಿಗಳಿಗೆ ಅಗತ್ಯ ಸಾಲ ನೀಡಿದರೆ ವಾರ್ಷಿಕ 255 ಯುವಕರು ಸ್ವಯಂ ಉದ್ಯೋಗ ಆರಂಭಿಸಲು ಸಹಕಾರಿಯಾಗುತ್ತದೆ. ಬ್ಯಾಂಕ್ ವ್ಯವಸ್ಥಾಪಕರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ರೈತ ಯುವಕರನ್ನು ನಿರುತ್ಸಾಹಗೊಳಿಸದೆ ಅಗತ್ಯ ದಾಖಲೆಗಳಲ್ಲಿ ಲೋಪವಿದ್ದರೆ ಅದನ್ನು ಸರಿಪಡಿಸಿಕೊಂಡು ಸಾಲಸೌಲಭ್ಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಸುರೇಶ್, ಇಲಾಖೆ ವತಿಯಿಂದ ದೊರಕುವ ಯೋಜನೆಗಳು ಮತ್ತು ಸಹಾಯಧನ ಸೌಲಭ್ಯಗಳ ಮಾಹಿತಿ ನೀಡಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣಕುಮಾರ್ ರೈತ ಫಲಾನುಭವಿಗಳ ಸಮಸ್ಯೆಗಳನ್ನು ಆಲಿಸಿ ಸಾಲ ಸೌಲಭ್ಯ ಪಡೆಯಲು ಇರುವ ನಿಯಮಾವಳಿಗಳನ್ನು ತಿಳಿಸಿದರು.
ಪುರಸಭೆ ಸದಸ್ಯ ಗಿರೀಶ್, ದಿಶಾ ಸಮಿತಿ ಸದಸ್ಯ ನರಸನಾಯಕ್, ಟಿಎಪಿಸಿಎಂಎಸ್ ನಿರ್ದೇಶಕ ಟಿ.ಬಲದೇವ್, ತಾಲೂಕು ಪಶು ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ದೇವರಾಜು, ಅಗ್ರಹಾರಬಾಚಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಶೋಕ್, ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರು ಇದ್ದರು.