

ಬಾಗಲಕೋಟೆ: ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಬಿವಿವಿ ಸಂಘ ಮುಂಚೂಣಿಯಲ್ಲಿದೆ. ಗ್ರಾಮೀಣ ಭಾಗದ ಮಕ್ಕಳಿಗಾಗಿ ಸಿಬಿಎಸ್ಸಿ ಶಾಲೆ ಪ್ರಾರಂಭಿಸಿರುವುದು ಶ್ಲಾಘನೀಯವಾಗಿದೆ ಎಂದು ವಾರಣಾಸಿಯ ಜಂಗಮವಾಡಿಮಠದ ಶ್ರೀಮದ್ ಕಾಶಿ ಜ್ಞಾನಸಿಂಹಾಸನಾಧೀಶ್ವರ ೧೦೦೮ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿ ಹೇಳಿದರು.
ಜಿಲ್ಲೆಯ ಗುಳೇದಗುಡ್ಡ ಪಟ್ಟಣ ಸಮೀಪವಿರುವ ಎಸ್.ಆರ್.ವಸ್ತ್ರದ ರೂರಲ್ ಪಾಲಿಟೆಕ್ನಿಕ ಪಕ್ಕದಲ್ಲಿ ನೂತನವಾಗಿ ಆರಂಭಿಸಿರುವ ಬಿವಿವಿ ಸಂಘದ ಬಸವೇಶ್ವರ ಇಂಟರನ್ಯಾಷನಲ್ ಪಬ್ಲಿಕ್ ಶಾಲೆ ನೂತನ ಕಟ್ಟಡದ ವಾಸ್ತುಶಾಂತಿ ಹಾಗೂ ಶಾಲಾ ಪ್ರಾರಂಭೋತ್ಸವ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಈ ಮೊದಲು ಸಿಬಿಎಸ್ಸಿ ಶಾಲಾ ಶಿಕ್ಷಣಕ್ಕೆ ಮಹಾನಗರಗಳಿಗೆ ತೆರಳುವ ಸಂದರ್ಭ ಇತ್ತು. ದೇಶಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ಬಿವಿವಿ ಸಂಘದ ಸಣ್ಣ ಗ್ರಾಮದಲ್ಲಿ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಅನುಕೂಲು ಸಿಬಿಎಸ್‌ಸಿ ಶಾಲೆ ಸ್ಥಾಪಿಸಿದೆ. ಸಂಘದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇಲ್ಲಿಗೆ ಬರುವು ನೀರಿಕ್ಷೆ ಇದ್ದು, ಎಲ್ಲರಿಗೂ ಇಲ್ಲಿ ಕಲಿಯುವ ಅವಕಾಶ ಸಿಗಲಿ, ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಈ ಶಾಲೆ ಅಡಿಪಾಯವಾಗಲಿ ಜಿಲ್ಲೆಯಾದ್ಯಂತ ಶಾಲೆಯ ಹೆಸರು ಬೆಳಗಲಿ ಎಂದು ಆಶೀರ್ವದಿಸಿದರು.
ಬಿವಿವಿ ಸಂಘದ ಸಂಘ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಈಗಾಗಲೇ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ಅನೇಕ ಶಾಲಾ ಕಾಲೇಜುಗಳನ್ನು ಆಯಾ ಪ್ರದೇಶವಾರು ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿನ ನಗರ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಪಡೆದು ದೇಶಕ್ಕೆ ಉತ್ತಮ ಪ್ರಜೆಯಾಗಲಿ, ಯಾರು ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಬಸವೇಶ್ವರ ಇಂಟರನ್ಯಾಷನಲ್ ಪಬ್ಲಿಕ್ ಶಾಲೆ ಆರಂಭಿಸಲಾಗಿದೆ. ಇಲ್ಲಿ ಗ್ರಂಥಾಲಯ, ಕಂಪ್ಯೂಟರ್, ಉತ್ತಮ ಕೊಠಡಿಗಳು, ಕ್ರೀಡಾ ಮೈದಾನ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯಗಳ ಜೊತೆಗೆ ಆಧುನಿಕ ಶೈಕ್ಷಣಿಕ ಉಪಕರಣಗಳ ಮೂಲಕ ಆಟ ಪಾಠಗಳು ಇವೆ. ಒಟ್ಟಾರೆ ಮಕ್ಕಳಿಗೆ ಜೀವನ ಭದ್ರತೆಯನ್ನೊಳಗೊಂಡ ಗುಣಮಟ್ಟದ ಶಿಕ್ಷಕ ನುರಿತ ಶಿಕ್ಷಕರಿಂದ ಸಿಗಲಿದೆ ಎಂದರು.
ಕೋಟಿಕಲ್‌ನ ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನೂತನ ಕಟ್ಟಡದ ವಾಸ್ತುಶಾಂತಿ, ಹೋಮ, ಲಕ್ಷ್ಮೀ ಸರಸ್ವತಿ ಹಾಗೂ ಗಣಪತಿಯ ಪೂಜೆಗಳು ಜರುಗಿದವು. ಈ ಸಂದರ್ಭದಲ್ಲಿ ವಾರಣಾಸಿಯ ಜಂಗಮವಾಡಿಮಠದ ಶ್ರೀಮದ್ ಕಾಶಿ ಜ್ಞಾನಸಿಂಹಾಸನಾಧೀಶ್ವರ ೧೦೦೮ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ಪಾದಪೂಜೆ ಮಾಡಿ ಸಂಘದಿಂದ ಗೌರವ ಸನ್ಮಾನ ಮಾಡಲಾಯಿತು.
ಬಿವಿವಿ ಸಂಘದ ಕಾರ್ಯದರ್ಶಿ ಮಹೇಶ್ವರ ಅಥಣಿ, ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಕಟ್ಟಡಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಹೇಶ ಕಕರೆಡ್ಡಿ, ಪ್ರಾಚಾರ್ಯ ರಾಜಶೇಖರ ಬಿಂಗೊಳಿ ಸೇರಿದಂತೆ ಇತರರು ಇದ್ದರು.