ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಶ್ಲಾಘನೀಯ

bkt-31-2
Published on

ಬಾಗಲಕೋಟೆ: ಗ್ರಾಮೀಣ ಭಾಗದಲ್ಲಿ ಬಡವರಿಗೆ ಅನುಕೂಲ ಕಲ್ಪಿಸುವ ವೈದ್ಯಕೀಯ ಸೇವೆ ನೀಡುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಎಸ್.ಆರ್.ಪಾಟೀಲ ಅವರು ತಮ್ಮ ಹುಟ್ಟೂರಿನಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪಿಸುವ ಮೂಲಕ ಆರೋಗ್ಯ ಕ್ಷೇತ್ರಕ್ಕೆ ತಮ್ಮ ಕೊಡುಗೆಯನ್ನು ಕೊಟ್ಟಿದ್ದಾರೆಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಬುಧವಾರ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ೬೩೦ ಹಾಸಿಗೆ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ಮೆಡಿಕಲ್ ಕಾಲೇಜ್ ನಡೆಸುವುದು ಬಹಳ ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ಎಸ್.ಆರ್.ಪಾಟೀಲ ಅವರು ಈ ಇಳಿವಯಸ್ಸಿನಲ್ಲಿ ಆರೋಗ್ಯ ಕ್ಷೇತ್ರದ ಸೇವೆಗೆ ಮುಂದಾಗಿರುವುದು ಅವರ ವ್ಯಕ್ತಿತ್ವ ಎಂಥದ್ದು ಎಂದು ತೋರಿಸಿಕೊಡುತ್ತದೆ ಎಂದರು.

ಮೆಡಿಕಲ್ ಕಾಲೇಜ್ ಉದ್ಘಾಟಿಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ದೇಶದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಅತಿ ಹೆಚ್ಚು ಮೆಡಿಕಲ್ ಕಾಲೇಜ್ ಇವೆ. ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿ ೭೧ ಮೆಡಿಕಲ್ ಕಾಲೇಜ್ ಗಳು ಇವೆ. ಎಸ್.ಆರ್.ಪಾಟೀಲ ಅವರು ಖಾಸಗಿಯಾಗಿ ವೈದ್ಯಕೀಯ ಮಹಾವಿದ್ಯಾಲಯ ಆರಂಭಿಸಿದ್ದು, ಇಲ್ಲಿಯೂ ಸಹ ಶೇ. ೪೦ ರಷ್ಟು ಸೀಟು ಸರ್ಕಾರಿ ಕೋಟಾದಲ್ಲಿ ಇರುತ್ತವೆ. ಇದರಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಮೆಡಿಕಲ್ ಕಾಲೇಜ್ ಆರಂಭಿಸಿರುವುದು ಸಣ್ಣ ಮಾತಲ್ಲ. ಅವರಿಗೆ ಒಳ್ಳೆಯದಾಗಲಿ, ಈ ಭಾಗದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಪಡೆಯಲು ಇದು ಸಹಕಾರಿ ಆಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ, ನಾನು ಸಹ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದೇನೆ. ನಮಗೆ ಮೆಡಿಕಲ್ ಕಾಲೇಜ್ ಆರಂಭಿಸಲು ೩೦ ವರ್ಷ ಬೇಕಾಯಿತು. ಆದರೆ, ನಗರ ಪ್ರದೇಶ ಅಲ್ಲದೇ ಪುಟ್ಟ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಶಾಲೆ ತೆರೆದು, ಶೈಕ್ಷಣಿಕ ಸೇವೆ ಆರಂಭಿಸಿರುವ ಎಸ್.ಆರ್.ಪಾಟೀಲ, ಶಿಕ್ಷಣ ಪ್ರತಿಷ್ಠಾನ ತೆರೆದು ೧೫ ವರ್ಷದ ಒಳಗಾಗಿಯೇ ವೈದ್ಯಕೀಯ ಮಹಾವಿದ್ಯಾಲಯ ಆರಂಭಿಸಿರುವುದು ಅವರ ಗಟ್ಟಿಮನಸ್ಸಿಗೆ ಸಾಕ್ಷಿಯಾಗಿದೆ. ಹಳ್ಳಿಯ ಜನರು, ರೈತಾಪಿ ವರ್ಗದವರಿಗೆ ಇಲ್ಲಿನ ಹೈಟೆಕ್ ಆಸ್ಪತ್ರೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ಆವರಣದಲ್ಲಿ ನಿರ್ಮಾಣ ಮಾಡಿರುವ ನಿಮ್ಮನ್ನು ಹೆತ್ತವರು ಮಂದಿರವನ್ನು ಶಿರಹಟ್ಟಿ ಫಕೀರೇಶ್ವರ ಮಠದ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಎರೆಹೊಸಳ್ಳಿ ಮಹಾಯೋಗಿ ವೇಮನ ಸಂಸ್ಥಾನಮಠದ ವೇಮನಾನಂದ ಸ್ವಾಮೀಜಿ ಉದ್ಘಾಟಿಸಿದರು. ವೇದಿಕೆಯಲ್ಲಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ, ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಹನಮಂತ ನಿರಾಣಿ, ಬಾಗಲಕೋಟೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ, ಸಂಸ್ಥೆಯ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಪಾಟೀಲ ಸೇರಿ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net